ಕುಂದಗೋಳ: ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದೆ. ಇದನ್ನು ಹತೋಟಿಗೆ ತರಲು ಅಬಕಾರಿ ಇಲಾಖೆ ಕೈಗೊಂಡ ಕ್ರಮವೇನು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಅವರು ಪ್ರಶ್ನಿಸಿ, ಅಬಕಾರಿ ಇಲಾಖೆ ಸಿಬ್ಬಂದಿ ವಿರುದ್ಧ ಗರಂ ಆದ ಪ್ರಸಂಗ ಇಂದಿನ ತ್ರೈಮಾಸಿಕ ಸಭೆಯಲ್ಲಿ ನಡೆಯಿತು.
ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ನಡೆದ ತ್ರೈಮಾಸಿಕ ಸಭೆಗೆ ಅಬಕಾರಿ ಇನ್ಸ್‌ಪೆಕ್ಟರ್ ಪ್ರೇಮಸಿಂಗ್ ಲಮಾಣಿ ಬದಲಾಗಿ ಇಲಾಖೆ ಸಿಬ್ಬಂದಿ ಹಾಜರಾಗಿ ವರದಿ ಒಪ್ಪಿಸಿದರು. ಇದರಿಂದಾಗಿ ಶಾಸಕಿ ಗರಂ ಆಗಿ ಅಧಿಕಾರಿ ಗೈರು ಹಾಜರಿಗೆ ನೋಟೀಸ್ ನೀಡುವಂತೆ ತಿಳಿಸಿ ಅಬಕಾರಿ ಸಿಬ್ಬಂದಿ ವರದಿ ಸ್ಥಗಿತಗೊಳಿಸಿದರು.
ಬಳಿಕ ಹೆಸ್ಕಾಂ ಇಲಾಖೆ ಅಧಿಕಾರಿ ವೀರೇಶ್ ಮಠದ ಅವರಿಗೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯುತ್ ಪೂರೈಸಿ ಸಮಸ್ಯೆ ಕೇಳಿ ಬರುತ್ತಿವೆ ಎಂದರು. ಸಿಡಿಪಿಓ ಅನ್ನಪೂರ್ಣ ಸಂಗಳದ ಅವರಿಗೆ ಅಂಗನವಾಡಿ ಕಟ್ಟಡಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಹಾಯಕ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ರೈತರು ಜೊತೆ ಒಳ್ಳೆ ಸಂಪರ್ಕ ಹೊಂದಲು ತಿಳಿಸಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ರಸ್ತೆ ನಿರ್ಮಾಣ ಕಾಮಗಾರಿ ಇಂಚಿಂಚು ಮಾಹಿತಿ ಪಡೆದರು.
ಅದರಂತೆ ಸಭೆಗೆ ಹಾಜರಾದ ಎಲ್ಲಾ ಇಲಾಖೆ ಅಧಿಕಾರಿಗಳ ವರದಿಯನ್ನು ಅಚ್ಚುಕಟ್ಟಾಗಿ ಶಾಸಕಿ ಕುಸುಮಾವತಿ ಶಿವಳ್ಳಿ ಆಲಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುರಿಯವರ ಹಾಗೂ ಆಡಳಿತಾಧಿಕಾರಿ ಉಪಸ್ಥಿತರಿದ್ದರು.
Kshetra Samachara
11/05/2022 10:39 pm