ಅಳ್ನಾವರ : ರಾಜ್ಯ ವಿಧಾನಸಭಾ ಚುನಾವಣೆ ಕಾವು ಅಷ್ಟಾಗಿ ಏರದಿದ್ದರೂ ಕಲಘಟಗಿ ಕ್ಷೇತ್ರದ ಟಿಕೆಟ್ ಗಾಗಿ ಮಾಜಿ ಸಚಿವ ಸಂತೋಷ್ ಲಾಡ್ ಹಾಗೂ ಮಾಜಿ ಎಂಎಲ್ಸಿ ನಾಗರಾಜ್ ಛಬ್ಬಿ ನಡುವಿನ ಕಿತ್ತಾಟ ಈಗ ತಾರಕಕ್ಕೇರ ತೊಡಗಿದೆ.
ಇತ್ತೀಚೆಗಷ್ಟೆ ಮಾಧ್ಯಮದವರೊಡನೆ ಮಾತನಾಡಿದ್ದ ಸಂತೋಷ್ ಲಾಡ್, " ಕಲಘಟಗಿ ಕ್ಷೇತ್ರಕ್ಕಾಗಿ ನಾನು ಮಾಡಿದ ಸೇವೆಯನ್ನು ಜನ ಗುರುತಿಸಿದ್ದಾರೆ. ಈ ಬಾರಿ ನನಗೇ ಟಿಕೆಟ್ ಖಚಿತ'' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಅದಕ್ಕೆ ಪ್ರತಿಯಾಗಿ ಈಗ ನಾಗರಾಜ್ ಛಬ್ಬಿ " ನಾನೊಬ್ಬ ಜನ ಸೇವಕ.ನೂರು ಇನ್ನೂರು ರೂಪಾಯಿ ಕೊಟ್ಟು ಪ್ರಚಾರ ಗಿಟ್ಟಿಸುವ ವ್ಯಕ್ತಿತ್ವ ನನ್ನದಲ್ಲ '' ಎಂದು ಪರೋಕ್ಷವಾಗಿ ಸಂತೋಷ್ ಲಾಡ್ ಬಂಡವಾಳ ಬಯಲು ಮಾಡಿದ್ದಾರಲ್ಲದೆ " ಟಿಕೆಟ್ ನನಗೆ ದೊರೆಯುವ ಭರವಸೆ ಇದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ '' ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಛಬ್ಬಿ, ಪಕ್ಷ ನನ್ನ ಸೇವೆಯನ್ನ ಗುರುತಿಸಿದೆ. ನಾನು ಅಗ್ಗದ ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡುವವನಲ್ಲ. ಮಾತಿಗಿಂತ ಕೃತಿ ಮೇಲು ಎಂಬ ನೀತಿಯುಳ್ಳವನು.ಕಲಘಟಗಿ ಮತ ಕ್ಷೇತ್ರ ಇವತ್ತಿನ ವರೆಗೂ ಹಿಂದುಳಿದ ಪ್ರದೇಶ. ಆಯ್ಕೆಯಾದ ಅಭ್ಯರ್ಥಿ ಗಳು ಮಾತಿನಲ್ಲೇ ಮನೆ ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ.
ಇಲ್ಲಿನ ಜನ ಮುಗ್ದರು, ಥಳುಕು ಬಳಕು ಅರಿದವರು.ಈ ಬಾರಿ ಇವರಿಗೆ ಅನ್ಯಾಯವಾಗಲು ಬಿಡುವುದಿಲ್ಲ.ಇಲ್ಲಿ ನಾನೆಂದು ನಾಯಕನಾಗಲು ಬಂದವನಲ್ಲ.ಜನ ಸೇವೆ ನನ್ನ ಮೂಲ ಮಂತ್ರ.ಇಲ್ಲಿನ ಜನ ಮತ ನೀಡಿ ಆಯ್ಕೆ ಮಾಡಿದ್ದು ಶೋಕಿ ಮಾಡಲು ಅಲ್ಲ.ಸೇವೆ ಮಾಡಲು.ಪ್ರಚಾರ ಬಿಟ್ಟು ಮೊದಲು ಕ್ಷೇತ್ರವನ್ನ ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ಛಬ್ಬಿ ಮತ್ತೆ ಲಾಡ್ ಅವರನ್ನು ಪರೋಕ್ಷವಾಗಿ ಲೇವಡಿ ಮಾಡಿದರು.
ನಿಜವಾಗಿಯೂ ನಾನು ನಾಯಕ ನಲ್ಲ,ಸೇವಕ.ನಾನೆಂದು ಪಕ್ಷದ ಪರ ದುಡಿಯುವ ವ್ಯಕ್ತಿ. ಅಧಿಕಾರದ ಅಮಲು ಹೊಂದಿದವನಲ್ಲ.ಜನ ಸಾಮಾನ್ಯರಿಗೆ ಕನಿಷ್ಠ ಮೂಲಭೂತ ಸೌಕರ್ಯವನ್ನಾದರು ಒದಗಿಸಬೇಕು.ಹಗಲಿನಲ್ಲಿ ಚಂದಾಮಾಮನ್ನ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇದೆಲ್ಲ ಬದಲಾಗುತ್ತೆ.ಕಲಘಟಗಿ ಮತ ಕ್ಷೇತ್ರ ಮಾದರಿಯ ಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಸಂತೋಷ್ ಲಾಡ್ ಗೆ ನಾಗರಾಜ್ ಛಬ್ಬಿ ಟಾಂಗ್ ನೀಡಿದರು.
ಈ ಸಂದರ್ಭದಲ್ಲಿ ದಸ್ತಗೀರಸಾಬ್ ಹುಣಸಿಕಟ್ಟಿ,ಅಜೀಜ್ ದೇವರಾಯ,ಕಿರಣ್ ಪಾಟೀಲ್ ಕುಲಕರ್ಣಿ,ಶಂಕರ ಮುಗಳಿ,ಅರವಿಂದ ಪಾಟೀಲ್ ಕುಲಕರ್ಣಿ ಬಸವರಾಜ ಪಠಾಣಿ ಇದ್ದರು.
Kshetra Samachara
04/05/2022 12:36 pm