ಹುಬ್ಬಳ್ಳಿ: ಬೆಂಗಳೂರಿನ ಕೆಜೆಹಳ್ಳಿ ಡಿಜೆಹಳ್ಳಿ ಘಟನೆಗೂ ಹುಬ್ಬಳ್ಳಿ ಘಟನೆಗೆ ಸಾಮ್ಯತೆ ಇದೆ. ದೂರು ಕೊಟ್ಟ ಮೇಲೆ ಆರೋಪಿಗಳನ್ನು ಬಂಧಿಸಿದ ಮೇಲೂ ಗಲಾಟೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಹಳೇ ಹುಬ್ಬಳ್ಳಿಯ ದಿಡ್ಡಿ ಓಣಿಯ ಆಂಜನೇಯ ದೇವಸ್ಥಾನಕ್ಕೆ ಹಾಗೂ ಗಲಭೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮೊದಲು ದೂರು ಕೊಟ್ಟು ಹೋದವರು, ಮರಳಿ ಗುಂಪು ಗುಂಪಾಗಿ ಬರ್ತಾರೆ. ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ, ವಾಹನಗಳು ಜಖಂಗೊಳಿಸಿದ್ದಾರೆ.
ಸಣ್ಣ ನಿರ್ಲಕ್ಷ್ಯ ಆಗಿದ್ರು ಕೆಜೆ ಹಳ್ಳಿ- ಡಿಜೆ ಹಳ್ಳಿ ಘಟನೆ ಮರುಕಳಿಸುತ್ತಿತ್ತು. ಕೆಜೆ ಹಳ್ಳಿ ಡಿಜೆಹಳ್ಳಿ ಘಟನೆಗೂ ಹುಬ್ಬಳ್ಳಿ ಘಟನೆಗೆ ಸಾಮ್ಯತೆ ಇದೆ ಎಂದರು.
ದೂರು ಕೊಟ್ಟ ಮೇಲೆ ಆರೋಪಿಯನ್ನು ಬಂಧಿಸಿದ್ದರೂ ಗಲಭೆ ಮಾಡಲಾಗಿದೆ. ಇಡೀ ಹುಬ್ಬಳ್ಳಿ ಹೊತ್ತಿ ಉರಿಯುವ ಸಂಭವ ಇತ್ತು. ಇಂಟೆಲಿಜೆನ್ಸಿ ವಿಫಲತೆ ಎಂದು ಹೇಳೋಕೆ ಬರಲ್ಲ. ನಿನ್ನೆ ನಮ್ಮ ಪೊಲೀಸರು ಗಲಭೆಯನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದಾರೆ.
ಕೇವಲ ಒಂದು ಗಂಟೆಯಲ್ಲಿ ಎಲ್ಲವನ್ನೂ ತಹಬದಿಗೆ ತಂದಿದ್ದಾರೆ. ಅವರಿಗೆ ನಾನು ಅಭಿನಂದನೆ ಸಲ್ಲಿಸುವೆ.
ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬ ಅನುಮಾನ ಬರುತ್ತಿದೆ. ಯಾರೇ ಕೃತ್ಯದಲ್ಲಿ ಭಾಗಿಯಾದ್ದರೂ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮತೀಯ ಶಕ್ತಿಗಳನ್ನು ಮಟ್ಟಹಾಕದೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/04/2022 08:50 pm