ಧಾರವಾಡ: ಸರ್ಕಾರ ನಡೆಸುವವರು ಶಾಂತಿ, ಸೌಹಾರ್ಧತೆಯಿಂದ ಸರ್ಕಾರ ನಡೆಸಬೇಕು. ಆದರೆ, ಇಂದು ನಾಡಿನಲ್ಲಿ ಶಾಂತಿ ಕದಡುತ್ತಿದೆ. ಇದನ್ನು ನೋಡಿದರೆ ಬೊಮ್ಮಾಯಿ ಅವರೇ ಸರ್ಕಾರ ನಡೆಸುತ್ತಿದ್ದಾರಾ ಅಥವಾ ಬೇರೆಯವರು ಸರ್ಕಾರ ನಡೆಸುತ್ತಿದ್ದಾರಾ ಎಂಬ ಸಂಶಯ ಕಾಡುತ್ತಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತ ಇಟ್ಟುಕೊಂಡು ಕೆಳ ದರ್ಜೆಯ ಕೆಲಸ ಮಾಡಲು ಹೊರಟಿದೆ. ಬಿಜೆಪಿಯವರು ಮಾನ, ಮರ್ಯಾದೆ ಬಗ್ಗೆ ಯೋಚನೆ ಮಾಡಬಾರದಾ? ಮಾವಿನ ಹಣ್ಣನ್ನು ಅನ್ಯ ಕೋಮಿನವರಿಗೆ ಮಾರಾಟ ಮಾಡಲು ಕೊಡಬೇಡಿ ಎಂದು ಉದ್ದೇಶಪೂರ್ವಕವಾಗಿ ಹೇಳ್ತೀರಲ್ಲಾ, ಮಾರುಕಟ್ಟೆ ವ್ಯವಹಾರ ಅವರ ಕೈಯಲ್ಲೇ ಇದೆ. ಮಾರುಕಟ್ಟೆ ದರ ಬಿದ್ದು ಹೋದರೆ ಅದನ್ನು ಯಾರು ಕೊಡುತ್ತಾರೆ? ಬೊಮ್ಮಾಯಿ ಅವರೇ ನೀವು ಖರೀದಿ ಮಾಡಲು ತಯಾರಿದ್ದೀರಾ? ಎಂದು ಪ್ರಶ್ನಿಸಿದರು.
ಮಾವು ವಾರ್ಷಿಕ ಬೆಳೆ, ಒಂದು ಕಾಯಿಗೆ ದರ ನಿಗದಿ ಮಾಡಿ. ಮಾರುಕಟ್ಟೆ ಬೆಲೆಯಲ್ಲಿ ಸಮಸ್ಯೆಯಾದರೆ ಇದೇ ದರದಲ್ಲಿ ಖರೀದಿ ಮಾಡುತ್ತೇವೆ ಎಂದು ಹೇಳಿ ನೋಡೋಣ. ಇದ್ಯಾವುದನ್ನೂ ಮಾಡಲು ನಿಮಗೆ ಯೋಗ್ಯತೆ ಇಲ್ಲ. ಆದರೆ, ಕೋಮು ಸೌಹಾರ್ಧತೆ ಕದಡುವ ಕಿತಾಪತಿ ಮಾಡುತ್ತೀರಿ. ಅಲ್ಲದೇ ಅದಕ್ಕೆ ಪ್ರಚೋದನೆ ಕೊಡುತ್ತೀರಿ. ಜನಾಂಗದ ವಿರುದ್ಧ ಜನಾಂಗವನ್ನು ಎತ್ತಿಕಟ್ಟುವ ಕೆಲಸ ಏಕೆ ಮಾಡುತ್ತೀರಿ ಎಂದರು.
ಇದನ್ನು ಸರಿಯಾಗಿ ನಿಭಾಯಿಸಲು ನಿಮ್ಮ ಕೈಯಲ್ಲಿ ಆಗದೇ ಇದ್ದರೆ ವಿಧಾನಸಭೆಯನ್ನು ವಿಸರ್ಜನೆ ಮಾಡಿ. ಸರ್ಕಾರವೇ ಇಂತಹ ಕಾರ್ಯಕ್ಕೆ ಪ್ರಚೋದನೆ ಕೊಟ್ಟರೆ ಸಿವಿಲ್ ವಾರ್‌ಗಳು ಶುರುವಾಗುತ್ತವೆ. ಮಾವು ಬೆಳೆಗಾರರು ತಮಗೆ ಬೇಕಾದ ಕಡೆ ಮಾವು ಮಾರಾಟ ಮಾಡುತ್ತಾರೆ. ಇದರ ನಡುವೆ ಸರ್ಕಾರದಿಂದ ಏನಾದರೂ ಯಡವಟ್ಟು ಆದರೆ ಸರ್ಕಾರವೇ ಅಲುಗಾಡುತ್ತೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಮಹದಾಯಿ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಗೋವಾದಲ್ಲೂ ಬಿಜೆಪಿ ಇದೆ ರಾಜ್ಯದಲ್ಲೂ ಬಿಜೆಪಿ ಇದೆ. ಬರೀ ನಾಟಕದ ಸಲುವಾಗಿ ಮಹಾದಾಯಿಗೆ ಬಜೆಟ್‌ನಲ್ಲಿ ಹಣ ಮೀಸಲಿಡುತ್ತಾರೆ. ಮಹದಾಯಿ ಕೆಲಸ ಇನ್ನೂ ಕೈಗೂಡದೇ ಇರುವುದು ದುರದೃಷ್ಟಕರ ಎಂದರು.
ಎಲ್ಲ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಔಷಧಿಗಳು ಶೇ.12 ರಷ್ಟು ಹೆಚ್ಚಾಗಿವೆ. ವಿದ್ಯುತ್ ರ ಹೆಚ್ಚಳ ಮಾಡಿದ್ದಾರೆ. ಭತ್ತ, ರಾಗಿ ದರ ಎಂಎಸ್‌ಪಿದರಕ್ಕಿಂತ ಕಡಿಮೆ ಇದೆ. ನಿಮಗೆ ಮರ್ಯಾದೆ ಇದ್ದರೆ, ಸರ್ಕಾರ ನಡೆಸುವವರು ಕನಿಷ್ಠ ಎಂಎಸ್‌ಪಿ ಉಳಿಸಿಕೊಳ್ಳಬೇಕು. ರೈತರ ಹಿತಾಸಕ್ತಿ ಬಗ್ಗೆ ಮಾತನಾಡಬೇಕು. ಆದರೆ, ಈ ಸರ್ಕಾರದವರು ರೈತರ ಮನೆ ಹಾಳು ಮಾಡುವ ಕೆಲಸ ಮಾಡಿದ್ದಾರೆ ಎಂದರು.
Kshetra Samachara
07/04/2022 10:16 pm