ಧಾರವಾಡ: ಕಾಂಗ್ರೆಸ್ ನಾಯಕತ್ವ ಬದಲಾವಣೆ ಬಗ್ಗೆ ಶಶಿ ತರೂರ ಮಾಡಿರುವ ಟ್ವೀಟ್ ವಿಚಾರವಾಗಿ ಧಾರವಾಡದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರು ಶಶಿ ತರೂರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಶಿ ತರೂರ ಎಲ್ಲೋ ಅಮೇರಿಕಾ, ಲಂಡನ್‌ದಲ್ಲಿ ಇದ್ದರು. ಕಾಂಗ್ರೆಸ್ ಪಕ್ಷ ಎರಡು ಸಲ ಅವರನ್ನು ಎಂಪಿ ಮಾಡಿದೆ. ಅವರು ತಮ್ಮ ಕ್ಷೇತ್ರದಲ್ಲಿ ತಮ್ಮ ಕೆಲಸ ಮಾಡಿಕೊಳ್ಳಲಿ ಎಂದಿದ್ದಾರೆ.
ಈ ದೇಶದ ಇತಿಹಾಸ ಕಾಂಗ್ರೆಸ್ ಪಕ್ಷದ ಇತಿಹಾಸ ಎಲ್ಲವೂ ಒಂದೇ ಎಂದಿರುವ ಸಲೀಂ ಅಹ್ಮದ್, ಈ ದೇಶಕ್ಕೆ ಕಾಂಗ್ರೆಸ್ ಸ್ವಾತಂತ್ರ್ಯ ಕೊಟ್ಟಿದೆ. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದವರು ಕಾಂಗ್ರೆಸ್‌ನವರು. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ ಗಾಂಧಿ ಈ ದೇಶಕ್ಕೆ ಬಲಿದಾನ ಕೊಟ್ಟವರು. ಒಬ್ಬೇ ಒಬ್ಬ ಬಿಜೆಪಿಯುವರು ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದವರಿಲ್ಲ, ಬಲಿದಾನ ಆದವರಿಲ್ಲ, ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿಲ್ಲ. ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದವರು, ಅದಕ್ಕಿಂತ ದೊಡ್ಡ ತ್ಯಾಗ ಇದೆಯಾ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷರು, ರಾಹುಲ್ ಗಾಂಧಿ ನಮ್ಮ ನಾಯಕರು. ಅವರ ನಾಯಕತ್ವದಲ್ಲೇ ಹೋಗುತ್ತೇವೆ ಎಂದ ಅವರು, ಸೋನಿಯಾ ಮನಮೋಹನ್ ಸಿಂಗ್‌ರನ್ನು ಪ್ರಧಾನಿ ಮಾಡಿದ್ದರು, ಆಗ ರಾಹುಲ್ ಗಾಂಧಿ, ಉಪ ಪ್ರಧಾನಿ ಆಗಬಹುದಿತ್ತು, ಆದರೂ ಆಗಲಿಲ್ಲ. ಗಾಂಧಿ ಪರಿವಾರ ಅಧಿಕಾರಕ್ಕೆ ಆಸೆ ಪಟ್ಟಿಲ್ಲ, ಹೀಗಾಗಿ ಈ ಪರಿವಾರದ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ ಎಂದ ಅವರು, ಯಾರಿಗೆ ಎಷ್ಟೆಷ್ಟು ಯೋಗ್ಯತೆ ಇದೆ ಅಷ್ಟು ಮಾತನಾಡಿದರೆ ಒಳ್ಳೆಯದು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/03/2022 07:04 pm