ಧಾರವಾಡ: ಶವವನ್ನು ತರಲು ವಿಮಾನದಲ್ಲಿ ಹೆಚ್ಚಿನ ಜಾಗ ಬೇಕಾಗುತ್ತದೆ. ಅದೇ ಜಾಗದಲ್ಲಿ ಎಂಟತ್ತು ಜನರನ್ನು ಜೀವಂತವಾಗಿ ಕರೆತರಬಹುದು ಎಂಬ ಶಾಸಕ ಅರವಿಂದ ಬೆಲ್ಲದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಪ್ರತಿಕ್ರಿಯೆ ನೀಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಯಾವುದೇ ಪಕ್ಷಗಳಗಾಗಲಿ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಅರವಿಂದ ಬೆಲ್ಲದ ಅವರು ಯಾವ ಆಧಾರದ ಮೇಲೆ ಆ ಮಾತನ್ನು ಹೇಳಿದ್ದಾರೋ ಅವರನ್ನೇ ಕೇಳಬೇಕು ಎಂದರು.
ಬೆಲ್ಲದ ಅವರ ಹೇಳಿಕೆಯನ್ನು ನಾನು ಗಮನಿಸಿಲ್ಲ. ಅದನ್ನು ಗಮನಿಸದೇ ಪ್ರತಿಕ್ರಿಯೆ ಕೊಡುವುದು ಸರಿಯಲ್ಲ. ಆದರೆ, ಇಂತಹ ವಿಚಾರದಲ್ಲಿ ಎಚ್ಚರಿಕೆಯ ಶಬ್ದಗಳನ್ನು ಬಳಸಬೇಕು ಎಂದರು.
ನವೀನ್ ಸಾವಿನಿಂದ ಆ ಕುಟುಂಬಗ್ಗೆ ಬಹಳ ನೋವಾಗಿದೆ. ಆತ ಯಾವುದೇ ತಪ್ಪನ್ನು ಮಾಡದೇ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೋಸ್ಕರ ಹೋಗಿ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಆತ ಯಾವ ದೇಶದ್ರೋಹದ ಕೆಲಸವನ್ನೂ ಮಾಡಿಲ್ಲ, ದೇಶಕ್ಕಾಗಿ ಪ್ರಾಣ ತ್ಯಾಗವನ್ನೂ ಮಾಡಿಲ್ಲ. ಕೇವಲ ಔಷಧಿ ಹಾಗೂ ತಿಂಡಿ ತರಲೆಂದು ಹೋದ ಮಗು ಯುದ್ಧಕ್ಕೆ ಆಹುತಿಯಾಗಿದೆ. ಇಂತಹ ವಿಚಾರದಲ್ಲಿ ವಿವಾದ ಬೆರೆಸಬಾರದು ಎಂದರು.
Kshetra Samachara
03/03/2022 07:24 pm