ಹುಬ್ಬಳ್ಳಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯ ಹಿಂದೆ ರಾಜಕೀಯ ಮೇಲಾಟದ ಪ್ರಶ್ನೆಯಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್‌ನವರು ಪ್ರತಿಭಟನೆ ಮಾಡ್ತಾ ಇರಲಿ. ಅವರು ಇತ್ತೀಚೆಗೆ ಗೋವಾದಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಅವರ ಪ್ರಣಾಳಿಕೆ ಏನಾಗಿತ್ತು? ಎಂದು ತಿಳಿಸಲಿ. ಸುಳ್ಳು ಹೇಳೋದಕ್ಕೂ ರಾಜಕಾರಣ ಮಾಡುವುದಕ್ಕೂ ಒಂದು ಮಿತಿ ಇರಬೇಕು. ಕಾಂಗ್ರೆಸ್ ಸುಳ್ಳಿನ ಸರದಾರರು ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಬಳ್ಳಾರಿ ಪಾದಯಾತ್ರೆ ಮಾಡಿ ಸಿಎಂ ಆದರೂ ಇದೀಗ ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಮೂಲಕ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಹಾಗಾಗಿ ಪಾದಯಾತ್ರೆ ಯಶಸ್ವಿಯಾಗುವುದು ಸಿದ್ದರಾಮಯ್ಯ ಅವರಿಗೂ ಸ್ವತಃ ಇಷ್ಟವಿಲ್ಲ. ಆದರೆ ಹೈಕಮಾಂಡ್ ತಾಕಿತು ಮಾಡಿದ ಕಾರಣಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಇದೊಂದು ಸಿಎಂ ಗಾದಿಗಾಗಿ ನಡೆಯುತ್ತಿರುವ ಪಾದಯಾತ್ರೆಯಾಗಿದೆ ಎಂದು ಕಿಡಿ ಕಾರಿದರು.
ವಿದ್ಯಾರ್ಥಿಗಳ ರಕ್ಷಣೆ ನಿರಂತರದಲ್ಲಿದೆ: ಉಕ್ರೇನ್ ಮತ್ತು ರಷ್ಯ ನಡುವೆ ನಡೆಯುತ್ತಿರುವ ಯುದ್ಧದ ಕಾರಣದಿಂದ ಅಲ್ಲಿನ ನಮ್ಮ ದೇಶದ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಮರಳಿ ದೇಶಕ್ಕೆ ಕರೆತರಲು ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಜೋಶಿ ಹೇಳಿದರು.
Kshetra Samachara
27/02/2022 01:25 pm