ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಹೀಗಾಗಿ ಅಭಿವೃದ್ಧಿ ದೃಷ್ಟಿಯಿಂದ ಹುಬ್ಬಳ್ಳಿ - ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯಾಗಬೇಕು ಎಂಬ ಕೂಗು ಕೇಳಿ ಬಂದಿದೆ.
ಹೌದು. ಧಾರವಾಡ ಪ್ರತಿಯೊಂದು ಹಂತದಲ್ಲಿಯೂ ಹುಬ್ಬಳ್ಳಿಗೆ ಸರಿಸಮವಾಗಿ ಬೆಳೆಯುತ್ತಿದೆ. ಆದ್ರೂ ಅನುದಾನ ಹಂಚಿಕೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮಲತಾಯಿ ಧೋರಣೆ ಅನುಸರಿಸುತ್ತ ಬರಲಾಗುತ್ತಿದೆ. ಪ್ರತ್ಯೇಕ ಪಾಲಿಕೆ ಆದಾಗಲೇ ಧಾರವಾಡ ಸರ್ವಾಂಗೀಣ ಅಭಿವೃದ್ಧಿಯಾಗಲು ಸಾಧ್ಯ ಎಂಬ ಕೂಗು ಈಗ ಮತ್ತೊಮ್ಮೆ ಕೇಳಿ ಬಂದಿದೆ.
ಶಿಕ್ಷಣ ಕಾಶಿ, ಪೇಢಾ ನಗರಿ ಸೇರಿದಂತೆ ವಿವಿಧ ಹೆಸರಿನಿಂದ ಕರೆಯಲ್ಪಡುವ ಧಾರವಾಡ ಈಗ ಔದ್ಯೋಗಿಕವಾಗಿ ಸಾಕಷ್ಟು ಬೆಳೆಯುತ್ತಿದೆ. ಆದ್ರೆ, ಮೂಲಭೂತ ಸೌಲಭ್ಯಗಳು ಮಾತ್ರ ಇಂದಿಗೂ ನಿರೀಕ್ಷೆ ಹಂತದಲ್ಲಿಯೇ ಇದೆ. ಅವುಗಳು ದೊರೆತಾಗಲೇ ಧಾರವಾಡದ ಸಮಗ್ರ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿ ಆಗುವುದರಲ್ಲಿ ನಿಸ್ಸಂದೇಹವಿಲ್ಲ ಎನ್ನುವುದು ಪ್ರತ್ಯೇಕ ಪಾಲಿಕೆಗೆ ಒತ್ತಾಯ ಮಾಡುತ್ತಿರುವವರ ವಾದ.
ಕಳೆದ 30 ವರ್ಷಗಳಿಂದ ಧಾರವಾಡ ಸೂಪರ್ ಮಾರುಕಟ್ಟೆ ಅಭಿವೃದ್ಧಿಯಾಗದೇ ಹಾಗೆಯೇ ಉಳಿದಿದೆ. ಅದನ್ನು ಅಭಿವೃದ್ಧಿಪಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಾರುಕಟ್ಟೆ ಪ್ರದೇಶ ನಗರದ ಹೃದಯ ಭಾಗದಲ್ಲಿದ್ದರೂ ಅದನ್ನು ಅಭಿವೃದ್ಧಿಪಡಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಜೊತೆಗೆ ಎರಡು ಬಾರಿ ಟೆಂಡರ್ ಪ್ರಕ್ರಿಯೆ ನಡೆಯದಿರುವುದು ಸ್ಥಳೀಯರಿಗೆ ನೋವುಂಟು ಮಾಡಿದೆ.
ಹೀಗಾಗಿ ಧಾರವಾಡದಿಂದ ಆಯ್ಕೆಯಾದ ಕೆಲ ಮಹಾನಗರ ಪಾಲಿಕೆಯ ಸದಸ್ಯರು ಪಾಲಿಕೆ ವಿಭಜನೆ ಬಗ್ಗೆ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ರಾಜಕೀಯವಾಗಿ ಇದಕ್ಕೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
22/02/2022 10:43 am