ಧಾರವಾಡ: ಇತ್ತೀಚಿನ ದಿನಗಳಲ್ಲಿ ಅಟ್ರಾಸಿಟಿ ಕಾಯ್ದೆಯ ದುರ್ಬಳಕೆ ತೀರಾ ಹೆಚ್ಚಾಗಿದ್ದು, ಈ ಕಾಯ್ದೆಯಲ್ಲಿ ತಿದ್ದುಪಡಿ ತರಬೇಕಾಗಿದೆ ಎಂದು ಆಗ್ರಹಿಸಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಧಾರವಾಡದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಧಾರವಾಡದ ಕಡಪಾ ಮೈದಾನದಿಂದ ಆರಂಭವಾದ ಈ ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಎನ್.ತಿಪ್ಪಣ್ಣ ಅವರೂ ಪಾಲ್ಗೊಂಡಿದ್ದರು.
ಕಡಪಾ ಮೈದಾನದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಮುಖಾಂತರ ಬಂದ ಪ್ರತಿಭಟನಾಕಾರರು, ಅಟ್ರಾಸಿಟಿ ಕಾಯ್ದೆಯನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಕಾಯ್ದೆಯಲ್ಲಿ ಕೆಲವೊಂದಿಷ್ಟು ತಿದ್ದುಪಡಿ ತರಬೇಕು ಎಂದು ಪ್ರಧಾನಮಂತ್ರಿಗಳಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಎನ್.ತಿಪ್ಪಣ್ಣ, ಈ ಕಾಯ್ದೆಯ ದುರ್ಬಳಕೆ ಹೆಚ್ಚಾಗಿದೆ. ಇದರಲ್ಲಿ ಕೆಲವೊಂದಿಷ್ಟು ತಿದ್ದುಪಡಿ ತರಬೇಕಿದೆ ಎಂದರು.
ಅಟ್ರಾಸಿಟಿ ಕಾಯ್ದೆಯ ವಿರುದ್ಧ ನಮ್ಮ ಪ್ರತಿಭಟನೆಯಲ್ಲ. ಆದರೆ, ಈ ಕಾಯ್ದೆ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ನಮ್ಮ ಪ್ರತಿಭಟನೆ. ಈ ರೀತಿಯ ಸುಳ್ಳು ಅಟ್ರಾಸಿಟಿ ದೂರು ದಾಖಲಿಸಿ ಹಣ ಮಾಡಿಕೊಳ್ಳುವ ಏಜೆಂಟರ್ ಹಾವಳಿ ಹೆಚ್ಚಾಗಿದೆ. ಕೂಡಲೇ ಈ ಬಗ್ಗೆ ಸರ್ಕಾರ ಪರಿಶೀಲನೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Kshetra Samachara
18/02/2022 06:01 pm