ಹುಬ್ಬಳ್ಳಿ: ಹಿಜಾಬ್ ವಿವಾದ ಬಗೆಹರಿಸುವಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ. ವಿದ್ಯಾರ್ಥಿಗಳ ನಡುವಿನ ಭಾವೈಕ್ಯ ಮುರಿಯುವ ಪ್ರಯತ್ನ ನಡೆದಿದೆ. ಇದಕ್ಕೆ ವಿದ್ಯಾರ್ಥಿಗಳು ಕಿವಿಗೊಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿ.ಪಂ ಮತ್ತು ತಾ.ಪಂ ಚುನಾವಣೆ ಇನ್ನಷ್ಟು ವಿಳಂಬವಾಗುವ ಕುರಿತು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದು ಖಂಡನೀಯ. ಅವರಿಗೆ ಸೋಲುವ ಭಯ ಇರುವ ಕಾರಣಕ್ಕೆ ಪದೇ ಪದೇ ಚುನಾವಣೆ ಮುಂದೂಡುವ ಕೆಲಸ ಮಾಡುತ್ತಿದ್ದಾರೆ. ಮೀಸಲಾತಿ ಗೊಂದಲ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಮುಂದೂಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ದೆಹಲಿ ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಈಶ್ವರಪ್ಪನವರು ಹೇಳಿಕೆ ಖಂಡನೀಯ. ಸಿಎಂ ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಹುಬ್ಬಳ್ಳಿ, ಗದಗ ಮತ್ತು ಹಾವೇರಿಯಲ್ಲಿ ಫೆ.13ರಂದು ಕಾಂಗ್ರೆಸ್ ವತಿಯಿಂದ ಡಿಜಿಟಲ್ ಸದಸ್ಯತ್ ಅಭಿಯಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಚಾಲನೆ ನೀಡಲಿದ್ದಾರೆ. ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಈ ಅಭಿಯಾನ ನಡೆಯಲಿದೆ. ರಾಜ್ಯಾದ್ಯಂತ ಒಟ್ಟು 1.20 ಲಕ್ಷ ಬೂತ್ ಸೇರಿ 50ಲಕ್ಷ ಸದಸ್ಯತ್ವ ನೋಂದಣಿ ಮಾಡುವ ಗುರಿ ಇದೆ. ಪಕ್ಷದ ನಾಯಕರು ಹಾಗೂ ಸದಸ್ಯರು ಈ ಅಭಿಯಾನದಲ್ಲಿ ಭಾಗವಹಿಸಬೇಕು. ಡಿಜಿಟಲ್ ಸದಸ್ಯತ್ವ ಅಭಿಯಾನದ ಸದಸ್ಯತ್ವಕ್ಕೆ ಐದು ರೂಪಾಯಿ ಶುಲ್ಕ ಇರಲಿದೆ ಎಂದರು. ಪ್ರತಿ ಮನೆಮನೆಗೆ ತೆರಳಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ತತ್ವ ಸಿದ್ದಾಂತಗಳ ಬಗ್ಗೆ ಮಾಹಿತಿ ತಿಳಿಸುವರು. ಆಡಳಿತಾರೂಢ ಬಿಜೆಪಿ ವೈಪಲ್ಯದ ಬಗ್ಗೆ ಮನದಟ್ಟು ಮಾಡಿಕೊಡಲಿದ್ದಾರೆ. ಫೆ.14ರ ನಂತರ ನಡೆಯುವ ಅಧಿವೇಶನದಲ್ಲಿ ಬಿಜೆಪಿ ದುರಾಡಳಿತದ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಲಾಗುವುದು ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/02/2022 10:35 pm