ಧಾರವಾಡ: ಮೇಕೆದಾಟು ವಿಷಯವಾಗಿ ಸಿಎಂ ಬಸವರಾಜ ಬೊಮ್ಮಾಯಿ ಕರೆದಿರುವ ಸರ್ವ ಪಕ್ಷ ಸಭೆಗೆ ನೋಟಿಸ್ ಬಂದ ಮೇಲೆ ಸಭೆಗೆ ಹೋಗಬೇಕೋ ಬೇಡವೋ ಎಂಬುದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಧಾರವಾಡದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕದಾಟು ಪ್ರಾಜೆಕ್ಟ್ ಆರಂಭ ಮಾಡಿದ್ದು ನಾವು. ಡಿಪಿಆರ್ ಮಾಡಿದ್ದು, ಸಿಪಿಸಿ ಕೊಟ್ಟಿದ್ದು ನಮ್ಮ ಕಾಲದಲ್ಲಿ. ಆದರೆ, ಅರಣ್ಯ ಹಾಗೂ ಪರಿಸರದ ಅನುಮತಿ ಸಿಗದೇ ಇರುವುದಕ್ಕೆ ಅದನ್ನು ಈ ಸರ್ಕಾರ ಜಾರಿ ಮಾಡಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರ್ಕಾರವೇ ಇದೆ. ಇವರು ಡಬಲ್ ಎಂಜಿನ್ ಸರ್ಕಾರ ಅಂತಾರೆ ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ ಎಂದರು.
ಈ ಕಾರ್ಯಕ್ಕೆ ತಮಿಳುನಾಡು ಅಡ್ಡಿ ಪಡಿಸಲು ಹಕ್ಕಿಲ್ಲ. ಪರಿಸರ ಕ್ಲಿಯರನ್ಸ್ ಕೊಟ್ಟರೆ ಕೆಲಸ ಆರಂಭ ಮಾಡಬಹುದು. ತಮಿಳುನಾಡಿನಲ್ಲಿ ಬಿಜೆಪಿ ತನ್ನ ಶಕ್ತಿ ವೃದ್ಧಿ ಮಾಡಿಕೊಳ್ಳಲು ಈ ರೀತಿ ಮಾಡುತ್ತಿದೆ. ಇಲ್ಲಿ ಇವರು ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದಾರೆ. ಇದು ಕುಡಿಯುವ ನೀರಿನ ಪ್ರಾಜೆಕ್ಟ್. ಸುಪ್ರೀಂ ಕೋರ್ಟ್ ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ಎಂದಿದೆ. ಯಾಕೆ ಇವರು ಅರಣ್ಯ ಕ್ಲಿಯರನ್ಸ್ ಪಡೆದುಕೊಳ್ಳಲು ವಿಳಂಬ ಮಾಡುತ್ತಿದ್ದಾರೆ ಗೊತ್ತಿಲ್ಲ. ಈ ಯೋಜನೆಯಿಂದ ಬೆಂಗಳೂರು ಸುತ್ತಮುತ್ತ, ಕೋಲಾರ, ರಾಮನಗರ ಸೇರಿ ಹಲವು ಜಿಲ್ಲೆಗಳಿಗೆ ನೀರು ಸಿಗುತ್ತದೆ. ಜೊತೆಗೆ 400 ಮೇಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದು ಎಂದರು.
ನಮ್ಮ ಪಾದಯಾತ್ರೆ ನಿಲ್ಲಿಸಬೇಕು ಎಂದೇ ಸರ್ಕಾರ ಕರ್ಫ್ಯೂ ಜಾರಿ ಮಾಡಿತ್ತು. ನ್ಯಾಯಾಲಯಕ್ಕೆ ಮರ್ಯಾದೆ ಕೊಟ್ಟು ನಾವು ಪಾದಯಾತ್ರೆ ನಿಲ್ಲಿಸಿದ್ದೇವೆ. ಆರ್ಥಿಕವಾಗಿ ಈ ಬಿಜೆಪಿ ಸರ್ಕಾರ ದಿವಾಳಿಯಾಗಿದೆ. ಯಾವುದೇ ಕೆಲಸಗಳು ಈ ಸರ್ಕಾರದಿಂದ ನಡೆಯುತ್ತಿಲ್ಲ ಎಂದರು.
ಬದಾಮಿ ಕ್ಷೇತ್ರದ ಜನ ಬಯಸಿದರೆ ಮುಂದಿನ ಚುನಾವಣೆಯಲ್ಲೂ ನಾನು ಬದಾಮಿಯಿಂದೇ ಸ್ಪರ್ಧೆ ಮಾಡುತ್ತೇನೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/01/2022 11:02 pm