ಧಾರವಾಡ: ಚಾರಿತ್ರಿವಾಗಿ, ಸಾಂಸ್ಕೃತಿಕವಾಗಿ ಮಹತ್ವ ಪಡೆದಿರುವ ಧಾರವಾಡ ಸೇರಿದಂತೆ ನಾಡಿನ ಪ್ರಮುಖ ಸ್ಥಳಗಳ ಕುರಿತು ಗ್ರಂಥಗಳ ಸರಣಿ ಪ್ರಕಟಿಸುವ ಯೋಜನೆಯನ್ನು ರೂಪಿಸಿ ಮುಂಬರುವ ಆಯವ್ಯಯದಲ್ಲಿ ಹಣ ಮೀಸಲಿಡಲಾಗುವುದು
ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ.ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಇಂದು ಚೆನ್ನವೀರಗೌಡ ಅಣ್ಣಾ ಪಾಟೀಲ ಸಂಸ್ಮರಣಾ ದತ್ತಿ ಹಾಗೂ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇತಿಹಾಸವನ್ನು ಅರಿಯದವರು ಇತಿಹಾಸ ಸೃಷ್ಟಿಸಲಾರರು. ಸರ್ಕಾರದ ವತಿಯಿಂದಲೇ ಧಾರವಾಡ ಸೇರಿದಂತೆ ನಾಡಿನ ಐತಿಹಾಸಿಕ ಸ್ಥಳಗಳ ಗ್ರಂಥಗಳನ್ನು ಪ್ರಕಟಿಸುವ ಕಾರ್ಯಕ್ರಮವನ್ನು ಆಯವ್ಯಯದಲ್ಲಿ ಹಾಕಿಕೊಳ್ಳಲಾಗುವುದು. ಧಾರವಾಡದ ಚರಿತ್ರೆ ದಾಖಲಿಸುವ ಕಾರ್ಯದ ಜವಾಬ್ದಾರಿಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ವಹಿಸಲಾಗುವುದು. ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ಕನ್ನಡದ ಹಲವು ಸಂಸ್ಥೆಗಳ ಸ್ಥಾಪನೆ, ಕರ್ನಾಟಕ ರಾಜ್ಯ ರಚನೆಗೆ ಕಾರಣವಾದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮಹತ್ವದ ಸ್ಥಾನವಿದೆ. ವಿಶಿಷ್ಠ ಅಂತರ್ಗತ ಶಕ್ತಿ ಇದೆ. ಸಂಘಕ್ಕೆ ಅಗತ್ಯವಿರುವ ಅನುದಾನ, ನಿವೇಶನ ಮತ್ತಿತರ ಬೇಡಿಕೆಗಳಿಗೆ ಸರ್ಕಾರ ಸಕಾರಾತ್ಮವಾಗಿ ಬೆಂಬಲಿಸಲಿದೆ. ಪಾಟೀಲ ಪುಟ್ಟಪ್ಪನವರು ಸುಮಾರು 52 ವರ್ಷಗಳ ಕಾಲ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿ ಹೋರಾಟ ಮಾಡಿದ್ದಾರೆ ಅವರ ಸಾಧನೆಯನ್ನು ಗೌರವಿಸಲು ಸರ್ಕಾರ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಸ್ಮಾರಕ ನಿರ್ಮಿಸಲಿದೆ.
ಹಿರಿಯರನ್ನು ಸ್ಮರಿಸುವುದು ಸ್ಫೂರ್ತಿದಾಯಕವಾಗಿರುತ್ತದೆ. ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದ ಚೆನ್ನವೀರಗೌಡ ಅಣ್ಣಾ ಪಾಟೀಲ ಅವರು ಧಾರವಾಡಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಲಿಂಗಾಯತ ಟೌನ್ ಹಾಲ್, ವೀರಶೈವ ಮಹಾಸಭೆ, ಕೆಸಿಸಿ ಬ್ಯಾಂಕ್ ಸ್ಥಾಪನೆ, ಎನ್ ಎಚ್ 4 ನಿರ್ಮಾಣ ಸೇರಿದಂತೆ ಹಲವು ಮಹತ್ವದ ಚಾರಿತ್ರಿಕ ಕಾರ್ಯಗಳನ್ನು ಅವರು ನಿರ್ವಹಿಸಿದ್ದಾರೆ. ಇತಿಹಾಸವನ್ನು ತಿರುಚುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಇದು ಸರಿಯಲ್ಲ. ಸತ್ಯವನ್ನು ವಸ್ತುನಿಷ್ಠವಾಗಿ ದಾಖಲಿಸಬೇಕು ಎಂದರು.
ಹುಬ್ಬಳ್ಳಿ ಧಾರವಾಡ ಸಮಗ್ರ ಅಭಿವೃದ್ಧಿಗೆ ಸರ್ಕಾರ ವಿಶೇಷ ಗಮನ ನೀಡಲಿದೆ. ಚೆನ್ನೈ ಮುಂಬೈ ಕೈಗಾರಿಕಾ ಕಾರಿಡಾರಿನಲ್ಲಿ ಧಾರವಾಡ ಪ್ರಮುಖ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ 849 ಕೋಟಿ ರೂಪಾಯಿ ನೀಡಲು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಅನುಮೋದನೆ ನೀಡಲಾಗಿದೆ ಎಂದರು.
ಧಾರವಾಡದ ಮನೆ ಮಗನಾದ ನಾನು ತವರಿಗೆ ಹೂವು ತರುತ್ತೇನೆ ಹೊರತು ಹುಲ್ಲನ್ನಲ್ಲ ಎಂದು ಮಾರ್ಮಿಕವಾಗಿ ಹೇಳಿದ ಮುಖ್ಯಮಂತ್ರಿಯವರು, ಇಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುವೆ ಎಂದರು.
ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ದೇವರ ಹುಬ್ಬಳ್ಳಿ ಸಿದ್ಧಾರೂಢಮಠದ ಶಿವಸಿದ್ಧಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮಾಜಿ ಸಚಿವ ಶಶಿಕಾಂತ ನಾಯ್ಕ, ಮಾಜಿ ಶಾಸಕ ಎ.ಬಿ.ದೇಸಾಯಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/01/2022 08:48 pm