ಹುಬ್ಬಳ್ಳಿ : ನೈಋತ್ಯ ರೇಲ್ವೆ ವ್ಯಾಪ್ತಿಯಲ್ಲಿ ಬರುವ ಚಿಕ್ಕಜಾಜೂರು-ಹುಬ್ಬಳ್ಳಿ ರೈಲ್ವೆ ಜೋಡಿ ಮಾರ್ಗ ಬರುವ ಡಿಸೆಂಬರ್ 22 ರೊಳಗಾಗಿ ಮುಕ್ತಾಯವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ತಿಳಿಸಿದ್ದಾರೆ. ಇಲ್ಲಿನ ನೈರುತ್ಯ ರೈಲ್ವೆ ವಲಯದ ಮಹಾಪ್ರಬಂಧಕರ ಕಛೇರಿಯಲ್ಲಿ ನಡೆದ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲಾ ಮಹತ್ವದ ರೇಲ್ವೆ ಅಭಿವೃದ್ಧಿ ಯೋಜನೆಗಳನ್ನು ತರಿತವಾಗಿ ಕಾರ್ಯಗತಗೊಳಿಸಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಲಯದ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ತುಮಕೂರು- ಚಿತ್ರದುರ್ಗ- ದಾವಣಗೆರೆ ಹೊಸ ರೈಲು ಮಾರ್ಗಕ್ಕೆ ಬೇಕಾಗಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಇರುವ ಎಲ್ಲ ಆಡೆ ತಡೆಗಳನ್ನು ನಿವಾರಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಗೊಳಿಸಲು ಸೂಚಿಸಿದರು.
ಹೊಸಪೇಟೆ-ವಾಸ್ಕೋ ಮಾರ್ಗದ ವಿದ್ಯುದೀಕರಣ ಈಗಾಗಲೇ ಮುಕ್ತಾಯ ಹಂತದಲ್ಲಿದ್ದು, ಸದ್ಯದಲ್ಲೇ ಕಾರ್ಯಾರಂಭವಾಗಲಿದೆ. ಅಲ್ಲದೇ ಹುಬ್ಬಳ್ಳಿ ಬೆಂಗಳೂರು ನಡುವಿನ ವಿದ್ಯುದೀಕರಣ ಕಾಮಗಾರಿ ಮುಂದಿನ 2023ರ ಜೂನ್ ಒಳಗೆ ಮುಕ್ತಾಯವಾಗಲಿದೆ ಎಂದರು.
ಎಲೆಕ್ಟ್ರಿಕ್ ರೈಲುಗಳ ಸಂಚಾರ ಪ್ರಾರಂಭಗೊಂಡರೆ ರೈಲ್ವೆ ಇಲಾಖೆಗೆ ಸಾಕಷ್ಟು ಹಣ ಉಳಿತಾಯವಾಗಲಿದೆ. ಅಲ್ಲದೇ ಪರಿಸರಕ್ಕೆ ಹಾನಿಯಾಗುವುದೂ ತಪ್ಪುತ್ತದೆ. ರೈಲ್ವೆ ಸಂಚಾರಕ್ಕೆ ಪ್ರತಿವರ್ಷ ಕೋಟ್ಯಂತರ ರೂ. ಡಿಸೇಲ್ ವೆಚ್ಚವಾಗುತ್ತಿದೆ. ಎಲೆಕ್ಟಿಕಲ್ ರೈಲು ಸಂಚಾರದಿಂದ ಡಿಸೇಲ್ ವೆಚ್ಚ ಕಡಿತಗೊಳ್ಳಲಿದೆ. ಈಗಿರುವ ಡಿಸೇಲ್ ರೈಲುಗಳು ಕಾರ್ಬನ್ ಡೈ ಆಕ್ಸೆಡ್ ಹೊರಸೂಸುತ್ತಿದ್ದು, ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು ಎಲೆಕ್ಟಿಕಲ್ ರೈಲುಗಳು ಪರಿಸರ ಸ್ನೇಹಿಯಾಗಿದೆ ಎಂದೂ ಸಚಿವ ಜೋಶಿ ತಿಳಿಸಿದ್ದಾರೆ.
ಇದಲ್ಲದೇ ಧಾರವಾಡ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಿಂದ ಹಳಿಯಾಳ - ಧಾರವಾಡ ರಸ್ತೆಯ ತಪೋವನ ಹತ್ತಿರದ ರೈಲ್ವೆ ಗೇಟ ನಂ- 300 ಹಾಗೂ ಕರ್ನಾಟಕದ ವಿಶ್ವ ವಿದ್ಯಾಲಯದ ರೈಲ್ವೆ ಗೇಟ ನಂ 299 ಈ ಎರಡು ಗೇಟಗಳಲ್ಲಿ ರಸ್ತೆ ಮೇಲೆತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆಗೆ ಸಚಿವ ಜೋಶೀಯವರು ಸೂಚಿಸಿದ್ದು, ಕರ್ನಾಟಕ ಸರ್ಕಾರದ ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಗೆ ಈ ಕಾರ್ಯಕ್ಕೆ ತಗಲುವ 50% ವೆಚ್ಚವನ್ನು ಭರಿಸುವ ಕುರಿತು ಕೂಡಲೇ ರೈಲ್ವೆ ಇಲಾಖೆ ವಿಕೃತ ಯೋಜನಾ ವರದಿ (ಡಿ.ಪಿ.ಆರ್) ಅನ್ನು ತಯಾರಿಸುತ್ತಿದ್ದು ಕೂಡಲೇ ಡಿ.ಪಿ.ಆರ್ ಅನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿದ್ದಾರೆ.
ಹುಬ್ಬಳ್ಳಿ ಬೈಪಾಸ್ ರೈಲ್ವೆ ಚೈನಿನ ಹತ್ತಿರ ಬರುವ ಗೋಪನಕೊಪ್ಪ, ಬೆಂಗೇರಿ ಹತ್ತಿರ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಮುಗಿಸಲು ಸೂಚಿಸಿದರಲ್ಲದೇ ಧಾರವಾಡ- ದಾಸನಕೊಪ್ಪ ವರ್ತುಲ ಅಗಲೀಕರಣಕ್ಕೆ ಬೇಕಾದ ಅಗತ್ಯವಿರುವ ಜಮೀನನ್ನು ಕೂಡಲೇ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ರೈಲ್ವೆ ಮಹಾಪ್ರಬಂಧಕರು ಒಪ್ಪಿಕೊಂಡಿದ್ದು, ಈ ಕುರಿತು ಕೂಡಲೇ ಕ್ರಮ ಜರುಗಿಸುವುದಾಗಿ ಸಚಿವರಿಗೆ ಭರವಸೆ ನೀಡಿದರು.
Kshetra Samachara
28/12/2021 09:31 am