ಧಾರವಾಡ: ಕೈಗಾರಿಕಾ ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಾಣದ ಸಲುವಾಗಿ ಸ್ವಾಧೀನಪಡಿಸಿಕೊಂಡ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಅನ್ಯ ಉದ್ದೇಶಕ್ಕೆ ಬಳಸುವುದನ್ನು ವಿರೋಧಿಸಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ರೈತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ನರೇಂದ್ರ ಮತ್ತು ಮುಮ್ಮಿಗಟ್ಟಿ ಗ್ರಾಮದ ಹದ್ದಿನಲ್ಲಿ ಬರುವ ಜಮೀನುಗಳನ್ನು 1994-96 ರಲ್ಲಿ ಕೆ.ಐ.ಎ.ಡಿ.ಬಿ.ಯು ಕೈಗಾರಿಕಾ ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಾಣದ ಸಲುವಾಗಿ ಸ್ವಾಧೀನಪಡಿಸಿಕೊಂಡಿತ್ತು. ಜಮೀನು ಸ್ವಾಧೀನದ ಸಂದರ್ಭದಲ್ಲಿ ಜಮೀನುಗಳ ಮಾಲಿಕರಾದ ರೈತರಿಗೆ ಪ್ರತಿ ಎಕರೆಗೆ 85 ಸಾವಿರ ರೂಪಾಯಿಗಳನ್ನು ಮಾತ್ರ ಪರಿಹಾರ ರೂಪದಲ್ಲಿ ಪಾವತಿಸಲಾಗಿದೆ. ಆಗಿನ ಸಂದರ್ಭದಲ್ಲಿನ ಮಾರುಕಟ್ಟೆ ದರವನ್ನು ನ್ಯಾಯಯುತವಾಗಿ ಸರ್ಕಾರ ಕೊಡಲಿಲ್ಲ. ಕೆ.ಐ.ಎ.ಡಿ.ಬಿ.ಯ ಇಂತಹ ಧೋರಣೆ ವಿರೋಧಿಸಿ ಕೆಲವು ರೈತರು ನ್ಯಾಯಾಲಯದ ಮೊರೆ ಕೂಡ ಹೋಗಿದ್ದು. ಆ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.
ಅಲ್ಲದೇ, ಕೈಗಾರಿಕೆಯ ಬೆಳವಣಿಗೆಗೆ ತಮ್ಮ ಜಮೀನುಗಳನ್ನು ಕಳೆದುಕೊಂಡ ರೈತರಿಗೆ ಪ್ರತಿಯೊಂದು ಕುಟುಂಬಕ್ಕೆ ಉದ್ಯೋಗ ಒದಗಿಸುವ ಭರವಸೆಯನ್ನು ಸಹ ಕೆ.ಐ.ಎ.ಡಿ.ಬಿ. ಅಧಿಕಾರಿಗಳು ನೀಡಿದ್ದರು. ಆದರೆ, ಇದುವರೆಗೂ ಯಾವುದೇ ರೈತ ಕುಟುಂಬಕ್ಕೆ ಅರ್ಹತೆಗೆ ತಕ್ಕಂತೆ ಉದ್ಯೋಗ ಕಲ್ಪಿಸದೇ ಅನ್ಯಾಯ ಮಾಡಲಾಗಿದೆ. ಆದಾಗ್ಯೂ ಈ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲ ಆಗಲಿ ಎಂದು ಹಲವಾರು ರೈತರು ತಮ್ಮ ಪೂರ್ವಜರಿಂದ ಬಂದ ಜಮೀನುಗಳನ್ನು ಕೊಟ್ಟು ತ್ಯಾಗ ಮಾಡಿದ್ದಾರೆ. ಆದರೆ, ಇತ್ತೀಚೆಗೆ ಕೆ.ಐ.ಎ.ಡಿ.ಬಿ.ಯು ವಶಪಡಿಸಿಕೊಂಡ ಜಮೀನುಗಳನ್ನು ಸ್ವಾಧೀನದ ಸಂದರ್ಭದಲ್ಲಿ ನಮಗೆ ತಿಳಿಸಿದ್ದ ಉದ್ದೇಶ ಬಿಟ್ಟು ಅನ್ಯ ಉದ್ದೇಶಗಳಿಗೆ ಜಮೀನುಗಳನ್ನು ಕೊಡುತ್ತಿರುವುದು ಮಾಧ್ಯಮಗಳ ಮೂಲಕ ನಮಗೆ ಗೊತ್ತಾಗಿದೆ. ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಿಸಲು ಸ್ವಾಧೀನಪಡಿಸಿಕೊಂಡ 241 ಎಕರೆ ಜಮೀನಿನ ಪೈಕಿ 130 ಎಕರೆ ಜಮೀನನ್ನು ಪ್ರಭಾವಿಗಳ ಐಷಾರಾಮಿ ಘಟಕಗಳಿಗೆ ಕೊಡುತ್ತಿರುವ ವಿಷಯ ವರದಿಯಾಗಿದೆ. ಇದೇ 130 ಎಕರೆ ಪೈಕಿ ಇತ್ತೀಚೆಗೆ ಖಾಸಗಿ ಒಡೆತನದ ಪ್ರಕಲ್ಪ ಹೊಟೇಲ್, ಪ್ರಕಲ್ಪ ಆಸ್ಪತ್ರೆ ಮತ್ತು ರಾಷ್ಟ್ರೋತ್ಥಾನ ಪರಿಷತ್ ಸಂಸ್ಥೆಗಳಿಗೆ ಸುಮಾರು 34 ಎಕರೆ ಪ್ರದೇಶವನ್ನು ಹಂಚಿಕೆ ಮಾಡುತ್ತಿರುವುದಾಗಿ ತಿಳಿದು ಬಂದಿದೆ. ಕೈಗಾರಿಕಾ ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ವಸತಿ ಬಡಾವಣೆ ನಿರ್ಮಿಸಿದರೆ ಅನೇಕರಿಗೆ ಅನುಕೂಲ ಆಗುತ್ತಿತ್ತು.
ಅದರೆ, ಜಮೀನು ಸ್ವಾಧೀನಪಡಿಸಿಕೊಳ್ಳುವ ಸಂದರ್ಭದಲ್ಲಿ ನಮಗೆ ತಿಳಿಸಿದ ಉದ್ದೇಶ ಬಿಟ್ಟು ಬೇರೆ ಉದ್ದೇಶಕ್ಕೆ ಜಮೀನು ಪರಭಾರೆ ಮಾಡುತ್ತಿರುವುದು ಖಂಡನೀಯ. ಸರಕಾರ, ಕೆ.ಐ.ಎ.ಡಿ.ಬಿ.ಯ ಇಂತಹ ನಡೆಯಿಂದ ಭೂಮಿ ಕಳೆದುಕೊಂಡ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಜಮೀನು ಸ್ವಾಧೀನ ಸಂದರ್ಭದಲ್ಲಿ ತಿಳಿಸಿದಂತೆ ಸದರಿ ಜಮೀನನಲ್ಲಿ ವಸತಿ ಬಡಾವಣೆ ನಿರ್ಮಿಸಬೇಕು. ಅದರ ಹೊರತು ಅನ್ಯ ಉದ್ದೇಶಕ್ಕೆ ಬಳಸಸುವುದಕ್ಕೆ ನಮ್ಮ ತೀವ್ರ ವಿರೋಧವಿದೆ. ಒಂದು ವೇಳೆ ಬಡಾವಣೆ ನಿರ್ಮಿಸದಿದ್ದರೆ ಸ್ವಾಧೀನಪಡಿಸಿಕೊಂಡ ಜಮೀನುಗಳನ್ನು ರೈತರಿಗೆ ಮರಳಿ ಕೊಡಬೇಕು. ಸರ್ಕಾರ ಈ ಜಮೀನುಗಳಿಗೆ ಕೊಟ್ಟಿರುವ ಪರಿಹಾರದ ಮೊತ್ತವನ್ನು ಬಡ್ಡಿ ಸಮೇತ ಮರಳಿ ಭರ್ತಿ ಮಾಡಲಾಗುವುದು. ನಮ್ಮ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಎಲ್ಲ ರೈತರು ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯ ಆಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ.
Kshetra Samachara
18/11/2021 03:01 pm