ಹುಬ್ಬಳ್ಳಿ: ಅವರೆಲ್ಲರೂ ಚುನಾಯಿತ ಪ್ರತಿನಿಧಿಗಳಾದರೂ ಅಧಿಕಾರ ಇಲ್ಲ. ವೋಟ್ ಹಾಕಿ ಪ್ರಜಾಪ್ರಭುತ್ವದ ಹಕ್ಕನ್ನು ಚಲಾವಣೆ ಮಾಡಲು ಕೂಡ ಅವರಿಂದ ಸಾಧ್ಯವಿಲ್ಲ. ಒಂದು ಕಡೆಗೆ ಅಧಿಕಾರ ಇಲ್ಲ ಇನ್ನೊಂದು ಕಡೆಗೆ ವೋಟ್ ಪವರ್ ಕೂಡ ಇಲ್ಲದಂತಾಗಿದೆ. ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್..
ಎರಡೂವರೆ ವರ್ಷ ಬಳಿಕ ನಡೆದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದರೂ ಪುರಪಿತೃರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನ ಹಕ್ಕು ಹೊಂದುವ ಅವಕಾಶದಿಂದ ವಂಚಿತರಾಗಲಿದ್ದಾರೆಯೇ..? ಹೀಗೊಂದು ಜಿಜ್ಞಾಸೆ ಶುರುವಾಗಿದೆ. ಹೌದು. ಸೆಪ್ಟೆಂಬರ್ 3 ರಂದು ಪಾಲಿಕೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 82 ಸದಸ್ಯರು ಚುನಾಯಿತರಾಗಿದ್ದಾರೆ. ಜನರಿಂದ ಚುನಾಯಿತಗೊಂಡ ಪ್ರತಿನಿಧಿಗಳು ಇದು ವರೆಗೂ ಅಧಿಕೃತವಾಗಿ ಕಾರ್ಪೋರೇಟರ್ ಆಗಿಲ್ಲ, ಏಕೆಂದರೆ, ಈ ಚುನಾಯಿತ ಸದಸ್ಯರು ಇಲ್ಲಿಯವರೆಗೆ ಸದಸ್ಯರಾಗಿ ಪ್ರಮಾಣವಚನವನ್ನೇ ಸ್ವೀಕರಿಸಿಲ್ಲ. ಈ ಕಾರಣಕ್ಕೆ ಪರಿಷತ್ ಚುನಾವಣೆಯಲ್ಲಿ ಮತದಾನ ಅಧಿಕಾರ ಸಿಗುತ್ತದೆಯೋ ಇಲ್ಲವೋ ಎಂಬ ಗೊಂದಲ ಸೃಷ್ಟಿಯಾಗಿದೆ. ಈ ರೀತಿಯ ಜಿಜ್ಞಾಸೆ ನಿರ್ಮಾಣವಾಗಿರುವುದು ಇದೇ ಮೊದಲ ಬಾರಿಗೆ ಎಂಬ
ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಚುನಾಯಿತ ಪ್ರತಿನಿಧಿಗಳು ಕೂಡ ಅಸಮಾಧಾನಗೊಂಡಿದ್ದಾರೆ.
ಪಾಲಿಕೆಯ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರು ಸರಕಾರದ ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಗೊಂಡಿದೆ. ಅವರು ಇನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ. ಹಾಗಾಗಿ ಅವರು ಪಾಲಿಕೆಯ ಅಧಿಕೃತ ಸದಸ್ಯರಾಗಿಲ್ಲ. ಪಾಲಿಕೆ ಸಾಮಾನ್ಯ ಸಭೆಯಲ್ಲೇ ಪ್ರತಿಜ್ಞೆ ವಿಧಿ ಬೋಧಿಸಲಾಗುತ್ತದೆ. ಇದೀಗ ಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸಾಮಾನ್ಯ ಸಭೆ ನಡೆಸುವ ಸಾಧ್ಯಾಸಾಧ್ಯತೆಗಳನ್ನು ಸರಕಾರವೇ ನಿರ್ಧರಿಸಬೇಕು ಎನ್ನುತ್ತಾರೆ ಪಾಲಿಕೆ ಆಯುಕ್ತರು.
ಒಟ್ಟಿನಲ್ಲಿ ಪಾಲಿಕೆ ಚುನಾಯಿತಗಳ ಪರಿಸ್ಥಿತಿ ನಿಜಕ್ಕೂ ಅತಂತ್ರವಾದಂತಾಗಿದೆ. ಕೂಡಲೇ ಈ ಎಲ್ಲ ಗೊಂದಲ ಬಗೆಹರಿದು ಚುನಾಯಿತ ಪ್ರತಿನಿಧಿಗಳಿಗೂ ಮತದಾನಕ್ಕೆ ಅವಕಾಶ ಕಲ್ಪಿಸಬೇಕಿದೆ.
Kshetra Samachara
10/11/2021 07:35 pm