ಧಾರವಾಡ: ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಹಾಗೂ ರೈತ ವಿರೋಧಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ, ಧಾರವಾಡದಲ್ಲಿ ಮಹಿಳಾ ಮಣಿಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.
ಈಗಾಗಲೇ ದೇಶವ್ಯಾಪಿ ಬೆಲೆ ಏರಿಕೆಯಿಂದಾಗಿ ಮಧ್ಯಮ ವರ್ಗದ ಜನರು ತತ್ತರಿಸಿ ಹೋಗಿದ್ದಾರೆ. ಪ್ರತಿ ತಿಂಗಳು ಗೃಹ ಬಳಕೆ ಸಿಲಿಂಡರ್ ಬೆಲೆ ಏರುತ್ತಲೇ ಸಾಗಿದೆ. ಇದರ ಜೊತೆಗೆ ಅಗತ್ಯ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇದರಿಂದಾಗಿ ಈಗ ಮಧ್ಯಮ ವರ್ಗದ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿಯನ್ನು ಇಂದಿನ ಸರ್ಕಾರಗಳು ಜನರಿಗೆ ತಂದಿವೆ. ಕೊರೊನಾ ಅನ್ ಲಾಕ್ ನಂತರ ಸಹಜ ಸ್ಥಿತಿಗೆ ಮರಳುತ್ತಿರುವ ಕುಟುಂಬದ ಆರ್ಥಿಕ ಸ್ಥಿತಿ, ಬೆಲೆಗಳ ಏರಿಕೆಯಿಂದಾಗಿ ಮತ್ತೆ ಹಳಿ ತಪ್ಪುತ್ತಿವೆ. ಬೆಲೆ ಏರಿಕೆ ನಿಯಂತ್ರಣ ಮಾಡುವುದರಲ್ಲಿ ಕೇಂದ್ರ ಬಿಜೆಪಿ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳು ಸಂಪೂರ್ಣ ವಿಫಲವಾಗಿ. ಕೂಡಲೇ ಸರ್ಕಾರಗಳು ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಇಲ್ಲವಾದಲ್ಲಿ ಜನತೆಯೇ ಮುಂದಿನ ದಿನಗಳಲ್ಲಿ ಸರ್ಕಾರಗಳಿಗೆ ತಕ್ಕ ಪಾಠ ಕಲಿಸುತ್ತಾರೆ.
ಈಗಾಗಲೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ನೀತಿಗಳನ್ನು ಖಂಡಿಸಿ ದೆಹಲಿ ಸೇರಿದಂತೆ ದೇಶವ್ಯಾಪಿ ರೈತರು ಪ್ರತಿಭಟನೆ ಮಾಡಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಿದ್ದರೂ ಕೂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರೈತರ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತಿಲ್ಲ. ಕೂಡಲೇ ರೈತ ವಿರೋಧಿ ಕಾನೂನನ್ನು ಪ್ರಧಾನಿಗಳು ಕೈ ಬೀಡಬೇಕು ಎಂದು ಇದೇ ವೇಳೆ ಒತ್ತಾಯಿಸಿದರು.
Kshetra Samachara
25/10/2021 07:24 pm