ಧಾರವಾಡ: ಹುಬ್ಬಳ್ಳಿ, ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಕೋಮು ಗಲಭೆಗೆ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವನಗರದಲ್ಲಿ ಕ್ರಿಶ್ಚಿಯನ್‌ರು ಮತಾಂತರ ಮಾಡುತ್ತಿದ್ದಾರೆ ಎಂದು ಬಿಜೆಪಿಯವರು ದಾಳಿ ಮಾಡುತ್ತಾರೆ. ಅಲ್ಲದೇ ರಸ್ತೆ ತಡೆ ಮಾಡುತ್ತಾರೆ. ಶಾಸಕ ಅರವಿಂದ ಬೆಲ್ಲದ ಅವರು ಧರ್ಮ ಮರೆತು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಆದರೆ, ಇಲ್ಲಿ ಕೋಮು ಸೌಹಾರ್ಧ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶಾಸಕ ಅರವಿಂದ ಬೆಲ್ಲದ ಅವರ ತಂದೆ ನಾವು ವೀರಶೈವ ಲಿಂಗಾಯತರು ಎನ್ನುತ್ತಾರೆ. ಆದರೆ, ಶಾಸಕರು ನಾವು ಹಿಂದೂಗಳು ಎನ್ನುತ್ತಾರೆ. ಮತಾಂತರ ನಡೆದಿದ್ದರೆ ಕಾನೂನು ಕ್ರಮ ಕೈಗೊಳ್ಳಲಿ ಕೇವಲ ಶಾಸಕರು ಪ್ರಚಾರಕ್ಕಾಗಿ ಮಾತ್ರ ಈ ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಮುಸ್ಲಿಂರ ಮೇಲೆ ದಾಳಿ ಮಾಡುತ್ತಿದ್ದ ಇವರು ಈಗ ಕ್ರಿಶ್ಚಿಯನ್ನರನ್ನು ಗುರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಹಾಗೂ ಅಧಿಕಾರಿಗಳು ಸತ್ತಿದ್ದಾರಾ ಎಂದು ಪ್ರಶ್ನಿಸಿದರು.
ಪ್ರತಿಯೊಬ್ಬರು ಅವರವರ ಭಾವನೆಗೆ ತಕ್ಕಂತೆ ದೇವರನ್ನು ನಂಬುತ್ತಾರೆ. ಹಾಗೆಂದ ಮಾತ್ರಕ್ಕೆ ಧರ್ಮ ಬದಲಾಗುತ್ತದೆಯೇ? ಎಲ್ಲದಕ್ಕೂ ಕಾನೂನು ಇದೆ. ಅರವಿಂದ ಬೆಲ್ಲದ ಅವರೇ ಜನರನ್ನು ಒಕ್ಕಲೆಬ್ಬಿಸಿ ಕಳುಹಿಸುತ್ತಾರೆ. ಲಿಂಗಾಯತರ ಮತ ಪಡೆದ ಶಾಸಕರು ಲಿಂಗಾಯತರ ಮೇಲೆ ಜಾತಿ ನಿಂದನೆ ಕೇಸ್ ಹಾಕಿಸಿದ್ದಾರೆ. ಶಾಸಕರು ಅವಳಿನಗರವನ್ನು ಮತ್ತೆ ಅಶಾಂತಿಗೆ ದೂಡಬಾರದು. ನಿಮಗೆ ಧೈರ್ಯ ಇದ್ದರೆ ಕ್ರಿಶ್ಚಿಯನ್ನರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಿ ನಿಮಗೆ ಯಾರೂ ಬೇಡ ಎಂದಿಲ್ಲ. ಪ್ರಜ್ಞಾವಂತ ಎಂದು ಹೇಳಿಕೊಳ್ಳುವ ಶಾಸಕರು ಧಾರವಾಡವನ್ನು ಅಮೇರಿಕಾ ಮಾಡಲು ಹೊರಟಿದ್ದರು. ಈಗಿನ ಧಾರವಾಡದ ಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
Kshetra Samachara
21/10/2021 02:01 pm