ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಉತ್ತರ ಪ್ರದೇಶ ಬಿಜೆಪಿ ಸರ್ಕಾರವನ್ನು ವಜಾಗೊಳಿಸಿ

ಧಾರವಾಡ: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ರೈತರ ಮೇಲೆ ನಡೆದಿರುವ ದೌರ್ಜನ್ಯ ಹಾಗೂ ರೈತರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಪತಿಗಳು ಕೂಡಲೇ ಮಧ್ಯೆ ಪ್ರವೇಶಿಸಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್.ನೀರಲಕೇರಿ ಆಗ್ರಹಿಸಿದ್ದಾರೆ.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಮೌರ್ಯ ಎನ್ನುವವರು ಹಾಗೂ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ಬರುತ್ತಿದ್ದ ವೇಳೆ ರೈತರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸಚಿವರ ಹಾಗೂ ಉಪಮುಖ್ಯಮಂತ್ರಿಗಳ ಬೆಂಗಾವಲು ವಾಹನಗಳ ಸಾಲಿನಲ್ಲಿದ್ದ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಕಾರನ್ನು ರೈತರ ಮೇಲೆ ಹತ್ತಿಸಲಾಗಿದೆ. ಈ ದುರ್ಘಟನೆಯಿಂದಾಗಿ 8 ಜನ ರೈತರು ಸಾವಿಗೀಡಾಗಿದ್ದು, ಓರ್ವ ಪತ್ರಕರ್ತ ಕೂಡ ಸಾವಿಗೀಡಾಗಿದ್ದಾರೆ ಎಂದರು.

ಪ್ರತಿಭಟನೆ ಮಾಡುವುದಕ್ಕೆ ನಮ್ಮ ಸಂವಿಧಾನ ಅವಕಾಶ ಕೊಟ್ಟಿದೆ. ರೈತರನ್ನು ಕೊಲೆ ಮಾಡುವ ಕೆಲಸ ಅಲ್ಲಿ ನಡೆದಿದೆ. ಉಪಮುಖ್ಯಮಂತ್ರಿ ಬರುವ ಸ್ಥಳದಲ್ಲಿ ಭದ್ರತೆ ನೀಡಬೇಕಾಗಿದ್ದು, ಸರ್ಕಾರದ ಜವಾಬ್ದಾರಿ. ಆದರೆ, ಈ ರೀತಿ ಹೇಯ ಕೃತ್ಯ ಎಸಗಬಾರದು. ಕೂಡಲೇ ರಾಷ್ಟ್ರಪತಿಗಳು ಈ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಘಟನೆಗೆ ಸಂಬಂಧಿಸಿದಂತೆ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಬೇಕಾದದ್ದು ವಿರೋಧ ಪಕ್ಷಗಳ ಜವಾಬ್ದಾರಿ. ಆದರೆ, ಪ್ರಿಯಾಂಕ ಗಾಂಧಿ ಹಾಗೂ ಅಖಿಲೇಶ್ ಯಾದವ್ ಅವರನ್ನು ಬಂಧಿಸಲಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ನಿರಂಕುಶ ಪ್ರಭುತ್ವ ಸಾಧನೆ ಮಾಡಲು ಸರ್ಕಾರ ಹೊರಟಿದೆ ಎಂದರು.

ರೈತರು ಹೋರಾಟ ಮಾಡಿದರೆ ದೊಣ್ಣೆಯಿಂದ ಹೊಡೆಯಬೇಕು. ಬಿಜೆಪಿ ಕಾರ್ಯಕರ್ತರೆಲ್ಲರೂ ಹೋರಾಟಕ್ಕೆ ಅವಕಾಶ ಕೊಡದೇ ಬಡಿಗೆಗಳನ್ನು ಹಿಡಿದು ನಿಲ್ಲಬೇಕು ಎಂಬ ಹೇಳಿಕೆಯನ್ನು ಹರಿಯಾಣ ಸಿಎಂ ಮೋಹನಲಾಲ್ ಖಟ್ಟರ್ ಕೊಡುತ್ತಾರೆ. ಇದು ಯಾವ ರೀತಿಯ ಹೇಳಿಕೆ? ಇಂತಹ ಸರ್ಕಾರಗಳು ಸರ್ಕಾರ ನಡೆಸಲು ಲಾಯಕ್ ಇಲ್ಲ. ಇವುಗಳನ್ನು ಡಿಸ್‌ಮಿಸ್‌ ಮಾಡಬೇಕು. ಇಂತಹ ಘಟನೆಗಳು ಆಕಸ್ಮಿಕ ಎನ್ನಬೇಕಾ ಅಥವಾ ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನಬೇಕಾ ಎಂದು ಪ್ರಶ್ನಿಸಿದರು.

ಒಬ್ಬ ಮಂತ್ರಿಯ ಮಗ ರೈತರ ಮೇಲೆ ವಾಹನ ಹತ್ತಿಸಿದ್ದು ಎಷ್ಟು ಸರಿ. ಅಮೆರಿಕಾದಲ್ಲಿ ಕೊರೊನಾದಿಂದ ಸತ್ತವರಿಗೆ ಈ ದೇಶದ ಪ್ರಧಾನಿ ಸಾಂತ್ವನ ಹೇಳುತ್ತಾರೆ. ಆದರೆ, ನಿನ್ನೆ ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿಗಳು ಒಂದು ಸಾಂತ್ವನವನ್ನೂ ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

05/10/2021 06:05 pm

Cinque Terre

40.51 K

Cinque Terre

4

ಸಂಬಂಧಿತ ಸುದ್ದಿ