ಧಾರವಾಡ: ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ. ಧಾರವಾಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಪ್ರಚುರಪಡಿಸುವುದು ಮಹತ್ವಪೂರ್ಣವಾಗಿದೆ ಎಂದು ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಹುಬ್ಬಳ್ಳಿಯ ವಿಜನ್ ಫ್ಲಾಯ್, ಬಿ.ಟಿ.ಎ. ಮಹಾವಿದ್ಯಾಲಯ ಸಹಯೋಗದೊಂದಿಗೆ ಶಾಲ್ಮಲಾ ನದಿ ಉಗಮ ಸ್ಥಾನದಲ್ಲಿ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವ ಸಂಸ್ಥೆಯ ಯುನೈಟೆಡ್ ನೇಷನ್ ವರ್ಲ್ಡ್ ಟೂರಿಸಂ ಅರ್ಗಾನೈಜೇಷನ್ ಆಶಯದಂತೆ ಪ್ರತಿವರ್ಷ ಸಪ್ಟೆಂಬರ್ 27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಪ್ರವಾಸೋದ್ಯಮ ದಿನವನ್ನು “ಸುಸ್ಥಿರ ಹಾಗೂ ಅಂತರ್ಗತ ಬೆಳವಣಿಗೆಗೆ ಪ್ರವಾಸೋದ್ಯಮ” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಧಾರವಾಡ ಜಿಲ್ಲೆ ಅನೇಕ ಐತಿಹಾಸಿಕ ಸ್ಥಳಗಳನ್ನು ಮತ್ತು ನೈಸರ್ಗಿಕವಾಗಿರುವ ಪ್ರವಾಸಿ ತಾಣಗಳನ್ನು ಹೊಂದಿದೆ. ಇವುಗಳನ್ನು ಗುರುತಿಸಿ, ರಾಜ್ಯಮಟ್ಟದಲ್ಲಿ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.
ಧಾರವಾಡವನ್ನು ಒಂದು ಮಹತ್ವಪೂರ್ಣ ಪ್ರವಾಸೋದ್ಯಮ ಹಬ್ ಅನ್ನಾಗಿ ಮಾಡಿ ಜಿಲ್ಲೆಯಾದ್ಯಂತ ಇರುವ ಪ್ರಸಿದ್ಧ ಪ್ರವಾಸಿಯ ಸ್ಥಳಗಳ ಅಭಿವೃದ್ಧಿಗೆ ಜಿಲ್ಲಾಡಳಿತ ಕ್ರಿಯಾ ಯೋಜನೆಯನ್ನು ರೂಪಿಸಲಿದೆ. ಪ್ರವಾಸೋದ್ಯಮವು ಆದಾಯ ತರುವ ಇಲಾಖೆಯಾಗಿದ್ದು, ಆರ್ಥಿಕ ಬೆಳವಣಿಗೆ ಜೊತೆಗೆ ಅನೇಕ ಉದ್ಯೋಗಗಳು ಸೃಷ್ಠಿಯಾಗಲಿವೆ ಎಂದು ಅವರು ಹೇಳಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ್ದ ಗೋವರ್ಧನ ಭಟ್ ಪ್ರವಾಸೋದ್ಯಮದ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕರಾದ ಕುಂದಗೋಳ ತಹಸೀಲ್ದಾರ ಅಶೋಕ ಶಿಗ್ಗಾಂವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜನ್ ಪ್ಲಾಯ್ ಬಿಟಿಎ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಪ್ರಕಾಶ ಶಿವಳ್ಳಿ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಚೇತನ ಜಾಡರ ಇದ್ದರು.
ಕಾರ್ಯಕ್ರಮದ ನಂತರ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ವಿಜನ್ ಫ್ಲಾಯ್ ಬಿ.ಟಿ.ಎ ಮಹಾವಿದ್ಯಾಲಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ, ಕಲಘಟಗಿ ತಾಲೂಕಿನ ಕಾಮಧೇನು ಗ್ರಾಮದಲ್ಲಿರುವ 800 ವರ್ಷ ಹಳೆಯ ಕಲ್ಮೇಶ್ವರ ದೇವಾಲಯ, ಕಲಘಟಗಿಯಲ್ಲಿರುವ 400 ವರ್ಷದಿಂದ ತೊಟ್ಟಿಲು ತಯಾರಿಕೆ ಮಾಡುತ್ತಿರುವ ಕೇಂದ್ರ ಮತ್ತು ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಖಾದಿ ಗ್ರಾಮೋದ್ಯೋಗ ಕೇಂದ್ರ ವೀಕ್ಷಿಸುವ ಪ್ರವಾಸ ಕಾರ್ಯಕ್ರಮಕ್ಕೆ ತೆರಳುವ ಬಸ್‍ಗೆ ಅತಿಥಿ ಗೋವರ್ಧನ ಭಟ್ ಅವರು ಹಸಿರು ಬಾವುಟ ತೋರಿ ಚಾಲನೆ ನೀಡಿದರು.
Kshetra Samachara
27/09/2021 09:34 pm