ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ರೇಷ್ಮೆ ಉತ್ಪಾದನೆ ಹೆಚ್ಚಾಗಿದೆ. ಪದವೀಧರರು ರೇಷ್ಮೆ ಉತ್ಪಾದನೆಗೆ ಹೆಚ್ಚು ಒತ್ತು ಕೊಟ್ಟಿದ್ದು, ಅವರಿಗೆ ಅನುಕೂಲ ಆಗುವ ದೃಷ್ಟಿಯಿಂದ ದಾವಣಗೆರೆಯಲ್ಲಿ ರೇಷ್ಮೆ ಮಾರುಕಟ್ಟೆ ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೈಮಗ್ಗ, ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇಷ್ಮೆ ಮಾರಾಟಕ್ಕೆ ರಾಮನಗರಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ದಾವಣಗೆರೆಯಲ್ಲೂ ಧಾರವಾಡ ಭಾಗದವರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೃಷಿ ಸಚಿವರೊಂದಿಗೆ ಮಾತನಾಡಿ ರೇಷ್ಮೆ ಮಾರುಕಟ್ಟೆ ಮಾಡಲಾಗುತ್ತಿದೆ ಎಂದರು.
ಧಾರವಾಡಕ್ಕೆ ಇಂದು ಬೇರೆ ಬೇರೆ ಕಂಪೆನಿಗಳು ಬರುತ್ತಿದ್ದು, ಈ ಭಾಗದ ನಿರುದ್ಯೋಗಿಗಳಿಗೆ ಅನುಕೂಲ ಆಗುತ್ತಿವೆ. ಏಕಸ್ ಎಂಬ ಕಂಪೆನಿ ಬರುತ್ತಿದ್ದು, ಅಂತಹ ಕಂಪೆನಿಗಳಿಗೆ ಕೆಐಎಡಿಬಿ ಜಾಗವನ್ನು ಕೊಡಲೇಬೇಕಾಗುತ್ತದೆ. ಕೆಐಎಡಿಬಿ ಜಾಗವನ್ನು ಯಾರು ನಿಯಮ ಬಾಹಿರವಾಗಿ ಪಡೆದಿದ್ದಾರೋ ಅಥವಾ ಯಾರು ನಿಯಮ ಬಾಹಿರವಾಗಿ ಕೊಟ್ಟಿದ್ದಾರೋ ಅದನ್ನು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಚಿವನಾದ ಬಳಿಕ ಮೊದಲ ಬಾರಿಗೆ ಕೆಡಿಪಿ ಸಭೆ ನಡೆಸಿದ್ದು, ಧಾರವಾಡ ಜಿಲ್ಲೆಯ ಗ್ರಾಮೀಣ ರಸ್ತೆಗಳ ಸುಧಾರಣೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಕ್ಸಿಜನ್ ಘಟಕಗಳಿಗೆ ಈ ಹಿಂದೆ ಭೂಮಿ ಪೂಜೆ ನೆರವೇರಿಸಲಾಗಿತ್ತು. ಈಗ ಅವು ಉದ್ಘಾಟನೆಗೆ ಬಂದು ನಿಂತಿವೆ. ಅನೇಕ ರಸ್ತೆಗಳ ಸುಧಾರಣೆಗೆ ಹಣ ಬಿಡುಗಡೆಯಾಗಿದ್ದು, ಆದಷ್ಟು ಬೇಗ ಟೆಂಡರ್ ಕರೆಯುವಂತೆ ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯ ಯಾವುದೇ ಗ್ರಾಮ ಪಂಚಾಯ್ತಿಯಲ್ಲಿ ಅವ್ಯವಹಾರ ನಡೆದರೆ ಆ ಬಗ್ಗೆ ಮುಲಾಜಿಲ್ಲದೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಪಂ ಸಿಇಓ ಅವರಿಗೆ ಸೂಚನೆ ಕೊಟ್ಟಿದ್ದೇವೆ. ಅಳ್ನಾವರದ ಹುಲ್ಲಿಕೇರಿಗೆ ಈಗಾಗಲೇ ಅನುದಾನ ಕೂಡ ಬಿಡುಗಡೆಯಾಗಿದ್ದು, ಈ ಹಿಂದೆ ಆದ ಕಳಪೆ ಕಾಮಗಾರಿ ಬಗ್ಗೆ ವರದಿ ತರಿಸಿಕೊಂಡು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
Kshetra Samachara
27/09/2021 05:50 pm