ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಉಣಕಲ್ ರಾಜನಾಲ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ. ಶೀಘ್ರವಾಗಿ ಮೊದಲ ಹಂತದಲ್ಲಿ 650 ಮೀಟರ್ ಉದ್ದದ ಪ್ರದೇಶದಲ್ಲಿ ತಡೆಗೋಡೆ ಹಾಗೂ ಉದ್ಯಾನವನ ನಿರ್ಮಾಣ ಮಾಡಲಾಗುವುದು. ಉಣಕಲ್ ಕೆರೆಯಿಂದ ಹೊರಬರುವ ನೀರಿನ ಸಂಸ್ಕರಣೆಗೆ ಘಟಕವನ್ನು ನಿರ್ಮಿಸಲಾಗುವುದು. ಕೆರೆಗೆ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ಉಣಕಲ್ ನಗರದಲ್ಲಿಂದು ಮಹಾನಗರ ಪಾಲಿಕೆಯ 2019-20 ನೇ ಸಾಲಿನ ಎಸ್.ಎಫ್.ಸಿ. ವಿಶೇಷ ಅನುದಾನ 8.39 ಕೋಟಿ ರೂಪಾಯಿಗಳಲ್ಲಿ ಉಣಕಲ್ ಹುಲಿಕೊಪ್ಪ, ಹನುಮಂತ ನಗರ, ದೇವಿನಗರ ಹಾಗೂ ಬನಶಂಕರಿ ನಗರದಲ್ಲಿ ರಾಜಕಾಲುವೆಗೆ ನೂತನವಾಗಿ ನಿರ್ಮಿಸಲಾಗಿರುವ ಸಂಪರ್ಕ ಸೇತುವೆಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಅತಿವೃಷ್ಠಿಯಿಂದ ರಾಜಕಾಲುವೆ ತುಂಬಿ ಹರಿದು ಸೇತುವೆಗಳು ಕೊಚ್ಚಿಹೋಗಿ ವಿವಿಧ ಕಾಲೋನಿಗಳಿಗೆ ಸಂಪರ್ಕ ಕಡಿತವಾಗಿತ್ತು. ತ್ವರಿತವಾಗಿ ಕಾಮಗಾರಿಗಳನ್ನು ಕೈಗೊಳ್ಳುವುದು ಅವಶ್ಯಕವಾಗಿತ್ತು. ಅವಳಿ ನಗರದಲ್ಲಿ ನೆರೆಹಾನಿಯಿಂದ ಉಂಟಾದ ತೊಂದರೆಗಳನ್ನು ಸರಿ ಪಡಿಸಿ ಪರಿಹಾರ ಕ್ರಮಕೈಗೊಳ್ಳಲು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಅನುದಾನ ಕೇಳಲಾಗಿತ್ತು. ಯಡಿಯೂರಪ್ಪನವರು 15 ಕೋಟಿ ಅನುದಾನ ಬಿಡುಗಡೆ ಮಾಡಿದರು.ಇದರಲ್ಲಿ 8.39 ಕೋಟಿ ಅನುದಾನದಲ್ಲಿ ನಾಲ್ಕು ಸೇತುವೆಗಳ ನಿರ್ಮಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಉಣಕಲ್ ಸಂತೆ ಮೈದಾನ ಅಭಿವೃದ್ಧಿಗೊಳಿಸಲಾಗಿದೆ ಎಂದರು.
ನಿನ್ನೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತವಾಗಿ ದೇಶಾದ್ಯಂತ ಬೃಹತ್ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಾಗಿದ್ದು, 2.24 ಕೋಟಿ ಲಸಿಕೆ ನೀಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 1.8 ಲಕ್ಷ ಲಸಿಕೆ, ರಾಜ್ಯದಲ್ಲಿ 29 ಲಕ್ಷ ಲಸಿಕೆ ನೀಡಲಾಗಿದೆ.
ಅವಳಿ ನಗರದ ಕುಡಿಯುವ ನೀರು ಸರಬರಾಜು ಮಂಡಳಿಯನ್ನು ಎಲ್.ಎನ್ ಟಿ ಹಸ್ತಾಂತರಿಸಿ 24*7 ಕುಡಿಯುವ ನೀರು ಸರಬರಾಜು ಕಾಮಗಾರಿ ತ್ವರಿತಗೊಳಿಸಲಾಗುವುದು. ಎರೆಡು ವರ್ಷದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
Kshetra Samachara
18/09/2021 05:20 pm