ಪಬ್ಲಿಕ್ ನೆಕ್ಸ್ಟ್ ವಿಶೇಷ : ಕೇಶವ ನಾಡಕರ್ಣಿ
ಹುಬ್ಬಳ್ಳಿ : ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈಗ ಸೋಲು ಗೆಲುವಿನ ಲೆಕ್ಕಾಚಾರ. ಈ ಬಾರಿ ನಿರೀಕ್ಷೆಗೂ ಮೀರಿ 157 ಪಕ್ಷೇತರರು (ಬಂಡಾಯ ) ಕಣಕ್ಕಿಳಿದಿದ್ದು ಬಿಜೆಪಿ ಹಾಗೂ ಕಾಂಗ್ರೆಸ್ ನಿದ್ದೆಗೆಡಿಸಿದ್ದಾರೆ.
ಇಷ್ಟೇ ಅಲ್ಲ ಮೊದಲ ಬಾರಿಗೆ ಸ್ಪರ್ಧೆಗಿಳಿದಿರುವ ಆಮ್ ಆದ್ಮಿ ಪಾರ್ಟಿ 40 ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸವಾಲು ಒಡ್ಡಿದೆ.
ಸಿ.ಎಂ ಅರವಿಂದ ಕೇಜ್ರಿವಾಲ್ ದಿಲ್ಲಿಯಲ್ಲಿ ಮಾಡಿರುವ ಸಾಧನೆಗಳನ್ನು ಮುಂದಿಟ್ಟಕೊಂಡು ಆಪ್ ಪ್ರಚಾರ ಮಾಡಿದೆ.
ಎಂದಿನಂತೆ ಪ್ರಧಾನಿ ನರೇಂದ್ರ ಮೋದಿ ಸಾಧನೆಗಳನ್ನೇ ಮುಂದಿಟ್ಟುಕೊಂಡು ಕಮಲಿಗರು ಪ್ರಚಾರ ಮಾಡಿದ್ದಾರೆ. ಅವಳಿ ನಗರದ ಅಭಿವೃದ್ಧಿಯಲ್ಲಿ ವಿಫಲವಾಗಿರುವ ಇವರಿಗೆ ಮೋದಿ ಫೋಟೊ ಬಿಟ್ಟರೆ ಗತಿಯೇ ಇಲ್ಲ ಎಂಬಂತಾಗಿದೆ.
ಪೆಟ್ರೋಲ್,ಡೀಜಲ್ ಹಾಗೂ ದಿನಸಿ ವಸ್ತುಗಳ ಬೆಲೆ ಗಗನಕ್ಕೇನು, ಅದನ್ನೂ ಭೇದಿಸಿ ಮೇಲೆ ಹಾರಿವೆ. ಇದು ಬಡ ಹಾಗೂ ಮಧ್ಯಮ ವರ್ಗ ಬದುಕನ್ನೇ ಹೈರಾಣು ಮಾಡಿದೆ. ಇನ್ನು ಅವೈಜ್ಞಾನಿಕ ಹಾಗೂ ವಿಳಂಬದ ಕಾಮಗಾರಿಗಳ ಸಿಟ್ಟು ಬಿಜೆಪಿ ಮೇಲೆ ತೋರಿದೂ ಆಶ್ಚರ್ಯವಿಲ್ಲ.
ಇದನ್ನೇ ಆಡಳಿತ ವಿರೋಧಿ ನೀತಿಯಾಗಿ ಬಳಸಿಕೊಂಡು ಬಿಜೆಪಿಗೆ ಬುದ್ಧಿ ಕಲಿಸಬೇಕಾದ ಕಾಂಗ್ರೆಸ್, ತನ್ನ ಹಳೆ ಚಾಳಿಯಂತೆ ಟಿಕೆಟ್ ಹಂಚಿಕೆಯಲ್ಲಿ ಕಾಲ ಕಳೆಯಿತು. ಇದರ ಮಧ್ಯ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಗುಂಪು ಎಂದುಕೊಂಡು ಕಿತ್ತಾಡಿದ್ದೂ ಉಂಟ. ಹೀಗಾಗಿ ಎಲ್ಲಿಯೂ ಕಾಂಗ್ರೆಸ್ ನಾಯಕರ ಸಂಘಟಿತ ಹೋರಾಟ ಕಂಡು ಬರಲಿಲ್ಲ. ತಮಗೆ ಆತ್ಮೀಯರಾದ ಕೆಲವು ಕಾರ್ಪೊರೇಟರ್ ವಾರ್ಡುಗಳಲ್ಲಿ ಮಾತ್ರ ತಿರುಗಾಡಿ ಕಾಲ್ಕಿತ್ತರು.
ಸಧ್ಯದ ಟ್ರೆಂಡ್ ನೋಡಿದರೆ ಬಿಜೆಪಿ ಅಥವಾ ಕಾಂಗ್ರೆಸ್ ಸ್ಪಷ್ಟ ಬಹುಮತ ಕಷ್ಟ ಸಾಧ್ಯ. ಏಕೆಂದರೆ ಬಂಡಾಯದ ಬಾವುಟ ಹಾರಿಸಿರುವ ಎರಡೂ ಪಕ್ಷಗಳ ಪ್ರಮುಖರು ಹಾಗೂ ಇತರೆ 157 ಅಭ್ಯರ್ಥಿಗಳು ಪಕ್ಷೇತರರಾಗಿ ಸಡ್ಡು ಹೊಡೆದಿದ್ದಾರೆ. ಹೀಗಾಗಿ ಈ ಬಾರಿ ಪಕ್ಷೇತರರೆ ನಿರ್ಣಾಯಕರಾಗುವ ಸಾಧ್ಯತೆ ಇದೆ. 47 ವಾರ್ಡುಗಳಲ್ಲಿ ಸ್ಪರ್ಧಿಸಿರುವ ಜೆಡಿಎಸ್ 8 - 10 ಸೀಟು ಗೆದ್ದು ತನ್ನ ಅಸ್ತಿತ್ವ ತೋರಲು ಹೆಣಗಾಡಬೇಕಿದೆ.
ಏನೇ ಇದ್ದರೂ ಎಲ್ಲ ವಾರ್ಡುಗಳಲ್ಲಿ ಆಯಾ ಅಭ್ಯರ್ಥಿಗಳ ಕಾರ್ಯಕ್ಷಮತೆ, ವರ್ಚಸ್ಸು, ಮತದಾರರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಗೆಲುವಿಗೆ ಕಾರಣವಾಗಲಿದೆ. ಒನ್ ಮ್ಯಾನ್ ಆರ್ಮಿ ರೀತಿ ಹೋರಾಡಿದ ಪಕ್ಷೇತರರು ಯಾರದೆ ಬೆಂಬಲ, ಪ್ರಭಾವವಿಲ್ಲದೆ ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
Kshetra Samachara
04/09/2021 01:21 pm