ಮತದಾರರ ಮನದಾಳದ ಮಾತು : ಕೇಶವ ನಾಡಕರ್ಣಿ
ಬಂತು ಬಂತು ಅನ್ನುವ ಹೊತ್ತಿಗೆ ಮಹಾನಗರ ಪಾಲಿಕೆ ಚುನಾವಣೆ ಮುಗಿತಾ ಬಂದಿದೆ. ಕಾರ್ಪೊರೇಟರುಗಳಿಲ್ಲದೆ ಭಣಗುಡುತ್ತಿದ್ದ ಪಾಲಿಕೆಯಲ್ಲಿ ಇನ್ನು ಪ್ರಮಿಳೆಯರ ಪಾರುಪತ್ಯ.
ಕಳೆದ 10 ವರ್ಷ ಪಟ್ಟಾಗಿ ಅಧಿಕಾರದಲ್ಲಿದ್ದ ಬಿಜೆಪಿಗೆ ಹೇಗಾದರೂ ಮಾಡಿ ಮರಳಿ ಚುಕ್ಕಾಣಿ ಹಿಡಿಯುವ ತವಕ. ಆದರೆ ಅದೇ ಅವಧಿಯಲ್ಲಿ ಅಧಿಕಾರದಿಂದ ಕಂಗೆಟ್ಟಿರುವ ಕಾಂಗ್ರೆಸ್ ಗೆ ಶತಾಯ ಗತಾಯ ಬಿಜೆಪಿಯನ್ನು ಕೆಳಗಿಳಿಸಲೇ ಬೇಕೆಂಬ ಹಟ. ಅದಕ್ಕಾಗಿ ಎರಡೂ ಪಕ್ಷಗಳ ನಾಯಕರು ನಡೆಸಿದ ಹೋರಾಟ ಅಷ್ಟಿಷ್ಟಲ್ಲ.
ಪಾಲಿಕೆ ಚುನಾವಣೆ ಸಾಮಾನ್ಯವೆಂದು ಭಾವಿಸಬೇಡಿ. ಇದು 2023 ರ ವಿಧಾನಸಭಾ ಚುನಾವಣೆಯ ದಿಕ್ಸೂಚಿ. ಪಾಲಿಕೆ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ 3 ರಲ್ಲಿ ಬಿಜೆಪಿ ಹಾಗೂ ಒಂದರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅವರೆಲ್ಲರಿಗೂ ಮುಂದಿನ ಅಸೆಂಬ್ಲಿ ಎಲೆಕ್ಷನ್ ಚಿಂತೆ. ಆ ಸಂದರ್ಭದಲ್ಲಿ ತಮ್ಮ ಹಿಂದೆ ನಿಲ್ಲುವವರಿಗೆ, ಅವರ ಪತ್ನಿಯರಿಗೆ ಟಿಕೆಟ್ ನೀಡಿ ಈ ಶಾಸಕರೆಲ್ಲ ಸಂತುಷ್ಟಪಡಿಸಿದ್ದಾರೆ ಎಂಬುದು ಸುಳ್ಳಲ್ಲ.
ನಾವು 45 ಸ್ಥಾನ ಗೆಲ್ಲುವುದು ಖಚಿತ ಎಂದು ಹಸ್ತ ಹೇಳಿಕೊಂಡರೆ 60 ಸ್ಥಾನ ಗ್ಯಾರಂಟಿ ಎಂದು ಕಮಲಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ರೀತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಓವರ್ ಕಾನ್ಫಿಡನ್ಸ್.
ಈ ಬಾರಿ ಜೆಡಿಎಸ್ ಜೊತೆ ಆಮ್ ಆದ್ಮಿ ಪಾರ್ಟಿ ಸಹ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಸವಾಲಾಗಿದ್ದಾರೆ. ಆಪ್ ಎಷ್ಟೇ ಸೀಟ್ ಗೆದ್ದರೂ ಅದು ಅದರ ಸಾಧನೆ ಎಂದೇ ಹೇಳಬೇಕು.
ಒಂದು ಮಾತಂತೂ ಸತ್ಯ. ಪ್ರಧಾನಿ ಮೋದಿ ನೋಡಿ, ಬೊಮ್ಮಾಯಿ, ಜಗದೀಶ ಶೆಟ್ಟರ್. ಅರವಿಂದ ಬೆಲ್ಲದ್ ಮಾತು ಕೇಳಿ ಬಿಜೆಪಿಗೇ ಓಟ್ ಹಾಕುತ್ತಾರೆಂದು ಕಮಲಿಗರು ನಂಬಿದ್ದರೆ ಅದು ಮಹಾಮೂರ್ಖತನ.
ಹಾಗೆ ಸೋನಿಯಾ,ರಾಹುಲ್ ಮುಖ ನೋಡಿ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನೋಡಿ, ಅವರ ಮಾತು ಕೇಳಿ ಕಾಂಗ್ರೆಸ್ಸನ್ನು ಗೆಲ್ಲಿಸುತ್ತಾರೆ ಎಂದುಕೊಂಡಿದ್ದರೆ ಅದೂ ಸುಳ್ಳು.
ಈ ಬಾರಿಯ ಚುನಾವಣೆ ಆಯಾ ಪಕ್ಷಗಳ ಸಮರ್ಥ ಅಭ್ಯರ್ಥಿಗಳನ್ನು ಅವಲಂಬಿಸಿದೆ.ಬಿಜೆಪಿ ಹಾಗೂ ಕಾಂಗ್ರೆಸ್ಸಿನಲ್ಲಿ ಹೆಚ್ಚಾಗಿ ಪದವೀಧರರು, ಬಿ.ಇ ಎಂಟೆಕ್ ಶಿಕ್ಷಣ ಪಡೆದ ವಿದ್ಯಾವಂತರು, ಯುವಕ ಯುವತಿಯರು, ಸಾಮಾಜಿಕ ಕಳಕಳಿಯುಳ್ಳವರು, ವಿವಿಧ ಕ್ಷೇತ್ರಗಳಲ್ಲಿ ಅನುಭವವುಳ್ಳವರು ಕಣಕ್ಕಿಳಿದಿದ್ದಾರೆ. ತಮ್ಮ ವಿದ್ಯೆ ಅನುಭವವನ್ನು ಸಮಾಜ ಸೇವೆಗೆ ಧಾರೆ ಎರೆಯುವ ಕನಸು ಕಂಡಿದ್ದಾರೆ.
ನಮಗೆ ಪಕ್ಷವಾಗಲಿ ನಾಯಕರಾಗಲಿ ನಗಣ್ಯ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಸಮರ್ಥ ಅಭ್ಯರ್ಥಿಗಳನ್ನೆ ಆಯ್ಕೆ ಮಾಡುತ್ತೇವೆಂದು ಮತದಾರರು ಪಣ ತೊಟ್ಟಿದ್ದು ಸುಳ್ಳಲ್ಲ. ಬಿಜೆಪಿಗೆ ಮತ ಹಾಕುತ್ತ ಬಂದಿದ್ದೇನೆ ಅದಕ್ಕೆ ನಮ್ಮ ಮತ ಎಂದು ನಂಬಿದ್ದರೆ ಆಗದು. ಇದು ಕಾಂಗ್ರೆಸ್ಸಿಗೂ ಅನ್ವಯ. ಗೊಡ್ಡು ಸಂಪ್ರದಾಯ ಮುಗಿದ ಕತೆ. ಏನಿದ್ದರೂ ಸಮರ್ಥ ಅರ್ಹ ಅಭ್ಯರ್ಥಿಗಳ ಕಾಲ.
ಕಳೆದ ಎರಡೂ ವರ್ಷಗಳಲ್ಲಿ ಕರದಾತರು ಕಂಗೆಟ್ಟು ಹೋಗಿದ್ದಾರೆ. ಮಹಾನಗರದಲ್ಲಿ ಅಸಂಖ್ಯೆ ಬಡಾವಣೆಗಳು ಬೆಳೆದು ನಿಂತಿವೆ. ಮೂಲಸೌಕರ್ಯಗಳಿಲ್ಲದೆ ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಕೊವಿಡ್ ಸಮಯದಲ್ಲಂತೂ ಬಡಾವಣೆ ಜನ ಹೇಗೆ ಬದುಕಿದ್ದರು ಎಂದು ಊಹಿಸುವುದೂ ಕಷ್ಟ.
ಪಾಲಿಕೆಗೆ ಚುನಾಯಿತ ಮಂಡಳಿ ಬರುತ್ತಲೇ ಎಲ್ಲವೂ ಸರಿಹೋಗುತ್ತೆ ಎಂದು ಹೇಳಲಾಗದು. ಕನಿಷ್ಟ ನಮ್ಮ ನಮ್ಮ ವಾರ್ಡಿನ ಕಾರ್ಪೊರೇಟರ್ ಬಳಿ ತಮ್ಮ ಸಮಸ್ಯೆಯನ್ನಾದರೂ ಹೇಳಿಕೊಳ್ಳಬಹುದು.
ಮತದಾರರ ಬಯಕೆ....ಅರ್ಹ, ಸಮರ್ಥರ ಆಯ್ಕೆ...!
Kshetra Samachara
02/09/2021 08:10 am