ಹುಬ್ಬಳ್ಳಿ: ಕುಟುಂಬ ರಾಜಕಾರಣಕ್ಕೆ ಈ ಬಾರಿಯ ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಅಗ್ರಸ್ಥಾನ. ವಾರ್ಡ್‌ಗಳ ಬದಲಾವಣೆ, ಹೆಚ್ಚಿದ ಮಹಿಳಾ ಮೀಸಲಾತಿಯಿಂದಾಗಿ ಮಾಜಿಗಳ ಪತ್ನಿ, ಮಕ್ಕಳಿಗೆ ಚಾನ್ಸ್.
ಆದರೆ ಇದಕ್ಕೆ ವಿಭನ್ನವಾಗಿ ಆಮ್ ಆದ್ಮಿ ಪಾರ್ಟಿ ಉತ್ಸಾಹಿ ಯುವಕರಿಗೆ ಅವಕಾಶ ನೀಡಿದೆ. ಮೊದಲ ಬಾರಿ ಪಕ್ಷ ಕಣಕ್ಕಿಳಿದಿರುವುದರಿಂದ ಎಲ್ಲಾ ರೀತಿಯ ಹೊಸ ಹೊಸ ಪ್ರಯೋಗ ಮಾಡಲು ಮುಂದಾಗಿದೆ. ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ನೇತೃತ್ವದ ದೆಹಲಿ ಸರ್ಕಾರ ನೀಡಿದ ಕೊಡುಗೆಗಳನ್ನು ಇಲ್ಲಿಯ ಜನತೆಗೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿಕೊಂಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರವನ್ನು ವಿಶ್ವದರ್ಜೆಯ ಮಟ್ಟಕ್ಕೆ ಕೊಂಡೊಯ್ಯುವುದು ಸೇರಿದಂತೆ ಇನ್ನೂ ಅನೇಕ ಭರವಸೆಗಳನ್ನು ಆಪ್ ನೀಡಿದ್ದು, ಅವು ಅನುಷ್ಠಾನಗೊಳ್ಳಬೇಕಾದರೆ ಯಂಗ್ & ಎನರ್ಜಿಟಿಕ್, ವಿದ್ಯಾವಂತ ಯುವಕ- ಯುವತಿಯರಿಗೆ ತಂಡ ಅತ್ಯವಶ್ಯ. ಈ ಕಾರಣದಿಂದಲೇ ಪಾಲಿಕೆ ಚುನಾವಣೆಯಲ್ಲಿ ಬಹುತೇಕ ಯುವ ಪಡೆಯನ್ನು ಕಣಕ್ಕೆ ಇಳಿಸಿ ಅವರನ್ನು ಹುರಿದುಂಬಿಸುವ ಕೆಲಸ ಮಾಡಿದೆ.
ಹುಬ್ಬಳ್ಳಿ-ಧಾರವಾಡ ಚುನಾವಣೆಗೆ ಕ್ಷಣ ಗಣನೆ ಆರಂಭವಾಗಿದೆ. ರಾಜಕೀಯದ ರಂಗು ಮುಗಿಲು ಮುಟ್ಟುತ್ತಿದೆ. ಈ ಮಧ್ಯೆಯೇ ಆಮ್ ಆದ್ಮಿ ಪಕ್ಷ ತನ್ನ ಭ್ರಷ್ಟಾಚಾರ ನಿರ್ಮೂಲನೆ ಸಿದ್ಧಾಂತ ಮೇಲೆ ದೆಹಲಿಯಲ್ಲಿ ಅಧಿಕಾರ ಹಿಡಿದಿದೆ. ಅದರ ಆಧಾರದ ಮೇಲೆಯೇ ಮಹಾನಗರ ಪಾಲಿಕೆ ಚುನಾವಣೆ ಎದುರಿಸುತ್ತಿದೆ. ಶುದ್ಧ ರಾಜಕಾರಣಕ್ಕಾಗಿ ಸುಶಿಕ್ಷಿತ ಸಮರ್ಥ ಜನಪರ ವಯೋಮಾನದ ಅಭ್ಯರ್ಥಿಗಳನ್ನು ನಿಲ್ಲಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಇನ್ನು ಟಿಕೆಟ್ ಹಂಚಿಕೆಯಲ್ಲಿಯೂ ಅಷ್ಟೇ, ಯಾವುದೇ ರಾಜಿ, ಸಂಧಾನ ಮಾಡದೇ ಯಾವುದೇ ಹಣಬಲ, ತೋಳ್ಬಲ ಇಲ್ಲದ ಸುಶಿಕ್ಷಿತ, ಸಮರ್ಥ ಜನಪರ ವ್ಯಕ್ತಿಗಳಿಗೆ ಟಿಕೆಟ್ ನೀಡಿ ಯುವಕರಿಗೆ ಹುರಿದುಂಬಿಸಿರುವ ಏಕೈಕ ಪಕ್ಷವಾಗಿದೆ.
ಆಮ್ ಆದ್ಮಿ ಪಕ್ಷ ಅಂದ್ರೆ ಯುವಕರಿಗೆ ಅವಕಾಶ ನೀಡುವ ಪಕ್ಷವಾಗಿದೆ. 41 ಅಭ್ಯರ್ಥಿ ಪೈಕಿ 8 ಅಭ್ಯರ್ಥಿಗಳು 21 ರಿಂದ 30 ವಯೋಮಾನದವರಾಗಿದ್ದಾರೆ. ಇಷ್ಟು ವಯಸ್ಸಿನ ಯುವ ಜನರಿಗೆ ಯಾವುದೇ ಪಕ್ಷದಲ್ಲಿ ಅವಕಾಶ ನೀಡಿಲ್ಲ. ಪರಿಣಾಮ ಆಪ್ ಯುವಕರ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಪಾಲಿಕೆ ಚುನಾವಣೆಗೆ ಯುವಕರ ಆಗಮನದಿಂದ ಇತರ ಪಕ್ಷಗಳ ಸ್ಪರ್ಧೆಗೆ ಬಹುತೇಕ ಹಿನ್ನೆಡೆಯಾಗಿ ರಾಜಕೀಯ ರಂಗದಲ್ಲಿ ಬದಲಾವಣೆಯ ಪರ್ವ ಶುರುವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
Kshetra Samachara
01/09/2021 05:41 pm