ಪಾಲಿಕೆ ಚುನಾವಣೆ ವಿಶೇಷ : ಕೇಶವ ನಾಡಕರ್ಣಿ
ರಾಜಕೀಯದಲ್ಲಿ ಕುಟುಂಬ ರಾಜಕಾರಣ ಈಗ ಸಾರ್ವತ್ರಿಕ. ಈ ಪದ್ಧತಿಯನ್ನು ದೇಶಕ್ಕೆ ಉಡುಗೊರೆಯಾಗಿ ಕೊಟ್ಟಿರುವುದು ಕಾಂಗ್ರೆಸ್ ಇರಬಹುದು, ಅದನ್ನು ತನ್ನ ಟೀಕಾಸ್ತ್ರವಾಗಿ ಬಳಸಿಕೊಂಡ ಬಿಜೆಪಿ ಸಹ ಮುಕ್ತ ಮನಸ್ಸಿನಿಂದ ಅಪ್ಪಿಕೊಂಡಿದೆ. ಇನ್ನು ಕುಟುಂಬ ರಾಜಕಾರಣದ ಪ್ರತಿರೂಪ ಜೆಡಿಎಸ್. ಹೀಗಾಗಿ ಅದರ ಬಗ್ಗೆ ಮಾತನಾಡದಿರುವುದೇ ಸೂಕ್ತ.
ಕೊನೆಗೂ ಕಾಂಗ್ರೆಸ್ ಅಳೆದು ತೂಗಿ 78 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಅನೇಕರು ಬಂಡಾಯದ ಬಾವುಟ ಬೀಸಿದ್ದು ಸೋಮವಾರದ ಹೊತ್ತಿಗೆ ಇನ್ನೂ ಅನೇಕು ಬಾವುಗಳು ಬೀಸಲಿವೆ.
ಲೋಕಸಭೆ, ವಿಧಾನಸಭೆ ನಂತರ ಈಗ ಮಹಾನಗರ ಪಾಲಿಕೆಯಂತಹ ಸ್ಥಳೀಯ ಸಂಸ್ಥೆಗಳಿಗೂ ಅಧಿಕಾರದ ಹಾಪಹಪಿ ಅಮರಿಕೊಂಡಿದೆ. ನನಗಿಲ್ಲದಿದ್ದರೇನು, ಪತ್ನಿ, ಸೊಸೆ, ಮಗಳು, ಮಗ, ತಾಯಿ ಹೀಗೆ ನಮ್ಮವರಿಗೆ ಟಿಕೆಟ್ ಇರಲಿ ಎಂದ ಕಾಂಗ್ರೆಸ್ ನಾಯಕರು, ತಮ್ಮವರ ಉಡಿಗೇ ಟಕೆಟ್ ಹಾಕಿಸಿದ್ದಾರೆ. ಇದಕ್ಕೆ ಬಿಜೆಪಿಯೂ ಹೊರತಾಗಿಲ್ಲ. ಟಿಕೆಟ್ ತಪ್ಪಿಸಿಕೊಂಡ ಮುಂಚೂಣಿ ನಾಯಕರು ತಮ್ಮವರಿಗೆ ಟಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೀಗಾಗಿ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು ಮೂಲೆಗುಂಪಾಗಿದ್ದಾರೆ. ಇವರ ಪ್ರಚಾರಕ್ಕೆ ಪಕ್ಷದ ಇನ್ನಿತರ ಕೆಲಸಕ್ಕೆ ನಾವು ಬೇಕು, ಟಿಕೆಟ್ ಮಾತ್ರ ಅವರ ಹೆಂಡಿರು ಮಕ್ಕಳಿಗೆ ಎಂಬ ಮಾತು ಎಲ್ಲ ಪಕ್ಷಗಳ ಕಾರ್ಯಕರ್ತರಿಂದ ಕೇಳಿಬರುತ್ತಿದೆ.
ಸಾಮಾಜಿಕ ನ್ಯಾಯ, ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಈಗ ಅದೇ ಸಮುದಾಯದ ಅಭ್ಯರ್ಥಿಗೆ ಕೈ ಕೊಟ್ಟಿದ್ದಾರೆ. 71 ವಾರ್ಡ ಎಸ್ ಸಿ ಬದಲಾಗಿ ಸಾಮಾನ್ಯವಾಗಿದೆ. ಇದನ್ನೆ ಲಾಭವಾಗಿಟ್ಟುಕೊಂಡು ಪಕ್ಷದ ನಾಯಕ ಅಲ್ತಾಫ್ ಹಳ್ಳೂರ ತಮ್ಮ ಮಗ ಮೊಹಮ್ಮದ ಹಳ್ಳೂರಗೆ ಟಿಕೆಟ್ ಕೊಟ್ಟಿದ್ದು ಆಕ್ರೋಶಕ್ಕೆ ಕಾರಣವಾಗಿದೆ.
ವಾರ್ಡಿನಲ್ಲಿ ಮುಸ್ಲಿಂ ಸಮುದಾಯದ ಮತಗಳು ಹೆಚ್ಚಾಗಿವೆ ಎಂಬುದು ಹಳ್ಳೂರ ವಾದ. ಆದರೆ ಎಲ್ಲ ಸಮುದಾಯಗಳ ಬೆಂಬಲ ತಮಗಿದೆ. ಹೀಗಾಗಿ ಎರಡು ಬಾರಿ ಅದೇ ವಾರ್ಡಿನಿಂದ ಆಯ್ಕೆಯಾಗಿದ್ದ ತಾವು ಪಕ್ಷೇತರ ಅಥವಾ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವದಾಗಿ ಗಣೇಶ ಟಗರಗುಂಟಿ ಘೋಷಿಸಿದ್ದಾರೆ.
ಅದೇ ರೀತಿ ವೆಂಕಟೇಶ ಮೇಸ್ತ್ರಿ ತಮ್ಮ ಪತ್ನಿಗೆ, ನಾಗರಾಜ ಗೌರಿ ತಮ್ಮ ತಾಯಿಗೆ, ದಾನಪ್ಪ ಕಬ್ಬೇರ್ ತಮ್ಮ ಪುತ್ರಿಗೆ, ರಾಜಾರಾಮ್ ಮಣಿಕುಂಟ್ಲ್ ತಮ್ಮ ಹೀಗೆ ಇನ್ನೂ ಅನೇಕರು ತಮ್ಮವರಿಗೇ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ದಿ. 23 ನಾಮಪತ್ರ ಸಲ್ಲಿಸಲು ಕೊನೆಯ ದಿನ. ಬಿಜೆಪಿ ಹಾಗೂ ಕಾಂಗ್ರೆಸ್ ದಲ್ಲಿ ಅಸಮಾಧಾನ ಭುಗಿಲೆದ್ದರೆ ಟಿಕೆಟ್ ಕೈ ತಪ್ಪಿದವರು ಬಂಡಾಯ ಹಾಗೂ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ.
ಇನ್ನೂ ಟಿಕಟ್ ಹಂಚಿಕೆ ಗೊಂದಲದಲ್ಲಿಯೇ ಮುಳುಗಿರುವ ನಾಯಕರು ಪ್ರಚಾರದ ಗೊಡವೆಗೇ ಹೋಗಿಲ್ಲ. ಉಳಿದಿರುವ ಕೇವಲ ಒಂದು ವಾರದಲ್ಲಿ ಅಭ್ಯರ್ಥಿಗಳು ಹಾಗೂ ಆಯಾ ಪಕ್ಷಗಳ ನಾಯಕರು ಮತದಾರರನ್ನು ತಲುಪುವುದು ಕಷ್ಟ ಸಾಧ್ಯ. ಹಾಗಾಗಿ ಅಭ್ಯರ್ಥಿಗಳು ಸಾಮಾಜಿಕ ಜಾಲ ತಾಣಗಳನ್ನು ಆಶ್ರಯಿಸುವುದು ಅನಿವಾರ್ಯ ಎಂದು ಹೇಳುತ್ತಾರೆ ಅಭ್ಯರ್ಥಿಗಳ ಬೆಂಬಲಿಗರು.
Kshetra Samachara
22/08/2021 11:20 am