ಧಾರವಾಡ: ಉದ್ಯಮಶೀಲರು ಸೋಲಿನಿಂದ ಧೃತಿಗೆಡದೇ ಸಮರ್ಥ ಮಾರ್ಗದರ್ಶನ, ಸ್ಪಷ್ಟ ಗುರಿಯೊಂದಿಗೆ ಸತತ ಪ್ರಯತ್ನ ಮಾಡಿದಾಗ ಯಶಸ್ಸು ಸಾಧ್ಯ.: ಮುದ್ರಾ, ಜೀವನೋಪಾಯ ಯೋಜನೆಗಳಡಿ ಆರ್ಥಿಕ ನೆರವು ನೀಡಲಾಗುತ್ತಿದೆ. ಕೌಶಲ್ಯಾಭಿವೃದ್ಧಿಪಡಿಸಿಕೊಂಡು ಯಶಸ್ಸು ಸಾಧಿಸಬಹುದು. ದೇಶದಲ್ಲಿ ಕರ್ನಾಟಕವೇ ಮೊದಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಕಲಿಕೆಯೊಂದಿಗೆ ಕೌಶಲ್ಯ ಬೆಳೆಸಲು ಸಂಕಲ್ಪ ಮಾಡಿದೆ ಎಂದು ಉನ್ನತ ಶಿಕ್ಷಣ,ಐಟಿ-ಬಿಟಿ, ?ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆಯು ಬೇಲೂರು ಕೈಗಾರಿಕಾ ಪ್ರದೇಶದ ಕರ್ನಾಟಕ ಉದ್ಯಮ ಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್)ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶ್ವ ಉದ್ಯಮಶೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.
ಸರ್ಕಾರ ಇದೇ ಮೊದಲ ಬಾರಿಗೆ ವಿಶ್ವ ಉದ್ಯಮಶೀಲರ ದಿನ ಆಚರಿಸುತ್ತಿದೆ. ಸಮಾಜವನ್ನು ಸದೃಢವಾಗಿ ಕಟ್ಟಲು ಉದ್ಯಮಶೀಲತೆ ಬಹಳ ಮುಖ್ಯ, ಯುವಜನರಲ್ಲಿ ಸಂಚಲನ ಮೂಡಿಸಲು, ಕೌಶಲ್ಯ ಬೆಳಸಲು 30 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹಾಗೂ ಕೈಗಾರಿಕಾ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು ಧಾರವಾಡದಲ್ಲಿ ಸಿಡಾಕ್ ಸಂಸ್ಥೆ ಸ್ಥಾಪಿಸಿರುವುದು ಪ್ರಶಂಸನೀಯ ಕಾರ್ಯವಾಗಿದೆ. ಯಾವುದೇ ಉದ್ಯಮ ಯಶಸ್ಸಿಗೆ ವ್ಯಾಪಾರದ ಕೌಶಲಗಳು ಅಗತ್ಯ, ಹಾಗಾದಾಗ ಮಾತ್ರ ಫಲ ಕಾಣಲು ಸಾಧ್ಯ. ವಿಜ್ಞಾನ, ತಂತ್ರಜ್ಞಾನದ ಯುಗದಲ್ಲಿ ಯಾವುದೇ ಹಳ್ಳಿಯಿಂದಲಾದರೂ ಬಂದಿರುವ ವ್ಯಕ್ತಿ ಉದ್ಯಮಶೀಲನಾಗಿ ಬೆಳೆಯಲು ಸಾಧ್ಯವಿದೆ. ಕೃಷಿ ಬೆಳೆ, ಉತ್ಪಾದನೆ ಮಾರುಕಟ್ಟೆ ಪರಸ್ಪರ ಅವಲಂಬಿತವಾಗಿವೆ. ಈಗಿನ ಡಿಜಿಟಲ್ ಮಾರುಕಟ್ಟೆ ತಂತ್ರಜ್ಞಾನ ಬಳಸಿಕೊಂಡು ವ್ಯವಹಾರ ಮಾಡುತ್ತಿರುವ ಸಂಸ್ಥೆಗಳನ್ನೇ ಆಧರಿಸಿ ನಮ್ಮ ಉದ್ಯಮಗಳನ್ನು ಸಶಕ್ತಗೊಳಿಸಬೇಕು. ನಮ್ಮಲ್ಲಿರುವ ಅನೇಕ ಗೃಹ, ಗುಡಿ ಕೈಗಾರಿಕೆಗಳು ಮಾರುಕಟ್ಟೆ ಕೊರತೆಯನ್ನು ಈ ಮೂಲಕ ನೀಗಿಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು. ಯಶಸ್ವಿ ಉದ್ಯಮಿಗಳ ಸಾಧನೆಯನ್ನು ಗುರುತಿಸಿ, ಅಭಿನಂದಿಸುವ ಹಾಗೂ ಅವರ ಮೂಲಕ ಪ್ರೇರಣೆ ಮಾಡುವ ಉದ್ದೇಶದಿಂದ ವಿಶ್ವ ಉದ್ಯಮಶೀಲರ ದಿನಾಚರಣೆಗೆ ಸರ್ಕಾರ ಮುಂದಾಗಿದೆ. ಮುದ್ರಾ ಯೋಜನೆ, ಜೀವನೋಪಾಯ ಯೋಜನೆಗಳ ಮೂಲಕ ಆರ್ಥಿಕ ನೆರವು, ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಕಾರ್ಯಕ್ರಮಗಳಿವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ಕಲಿಕೆಯೊಂದಿಗೆ ಬದುಕಿಗೆ ಅಗತ್ಯವಾಗಿರುವ ಔದ್ಯೋಗಿಕ ಕೌಶಲ್ಯವನ್ನು ಬೆಳೆಸುವ ಕಾರ್ಯವನ್ನು ಕರ್ನಾಟಕದಿಂದಲೇ ಪ್ರಾರಂಭಿಸಲಾಗುತ್ತಿದೆ. ಉದ್ಯಮಶೀಲತೆಯ ಅಭಿವೃದ್ಧಿಗೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಶ್ರಮ, ಆಸಕ್ತಿ ಮತ್ತು ಗುಣಮಟ್ಟದ ಸೇವೆಗಳ ಮೂಲದ ಸದೃಢ ಗುಣಮಟ್ಟದ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
Kshetra Samachara
21/08/2021 07:38 pm