ಚುನಾವಣಾ ವಿಶೇಷ : ಕೇಶವ ನಾಡಕರ್ಣಿ
ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ 48 ಗಂಟೆಗಳು ಬಾಕಿ ಉಳಿದಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಹರಸಾಹಸ ಮಾಡುತ್ತಿವೆ. ಎರಡೂ ಪಕ್ಷಗಳು ಕಾದ ನೊಡುವ ತಂತ್ರ ಅನುಸರಿಸುತ್ತಿರುವುದು ವಿಳಂಬಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಬಹುತೇಕ ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪುವ ಭಯವಾದರೆ, ಟಿಕೆಟ್ ವಂಚಿತರು ಬಂಡಾಯ ಏಳಬಹುದೆಂಬ ಆತಂಕ ಪಕ್ಷದ ನಾಯಕರನ್ನು ಕಾಡತೊಡಗಿದೆ.
ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರ ಕಿರಿಕಿರಿಯಿಂದ ಬೇಸತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಚುನಾವಣೆಗೆ ಪಕ್ಷದ ಸಂಯೋಜಕರಾಗಿರುವ ಆರ್. ಧ್ರುವನಾರಾಯಣ, ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಸದಸ್ಯರಾದ ಶಿವಾನಂದ ಪಾಟೀಲ, ತನ್ವೀರ್ ಸೇಠ್ ತಂಡ ಬೆಳಗಾವಿಗೆ ಶೀಫ್ಟ್ ಆಗಿದ್ದು ಅಲ್ಲಿಯೆ ಪಟ್ಟಿ ಅಂತಿಮಗೊಳಿಸಲಿದ್ದಾರಂತೆ.
ಮುಂಚೂಣಿ ನಾಯಕರಿಗಷ್ಟೇ ಚುನಾವಣಾ ಉಸ್ತುವಾರಿಗಳನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತಾದರೂ, ಆಕಾಂಕ್ಷಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದರಿಂದ ಆರ್.ವಿ. ದೇಶಪಾಂಡೆ ಅವರು ಗರಂ ಆಗಿದ್ದರು. ಈ ಕಾರಣಕ್ಕಾಗಿಯೇ ಸಭೆಯನ್ನು ಹುಬ್ಬಳ್ಳಿಯಿಂದ ಬೆಳಗಾವಿಗೆ ಸ್ಥಳಾಂತರ ಮಾಡಲಾಗಿತ್ತಂತೆ.
ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಸದಾನಂದ ಡಂಗನವರ, ನಾಗರಾಜ ಛಬ್ಬಿ ಸೇರಿದಂತೆ ಕೆಲ ಪ್ರಮುಖರು ತಮ್ಮ ತಮ್ಮ ಬೆಂಬಲಿಗರಿಗೇ ಟಿಕೆಟ್ ನೀಡುವಂತೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.
ಅವಳಿ ನಗರದ ಕಾಂಗ್ರೆಸ್ ದಲ್ಲಿ ಮೂರು ಗುಂಪುಗಳಾಗಿವೆ. ಈಗ ಈ ಗುಂಪುಗಳ ನಾಯಕರು ತಮ್ಮ ತಮ್ಮ ಬೆಂಬಲಿಗರಿಗೇ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿರುವುದು ಕಗ್ಗಂಟಾಗಿದೆ. ಈಗಾಗಲೇ ನಿಷ್ಠಾವಂತ ಕಾಂಗ್ರೆಸ್ ಅಭ್ಯರ್ಥಿಗಳು ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗದ್ದರಿಂದ ಪಕ್ಷೇತರ ಅಭ್ಯಥಿಯಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆ.
ಪಕ್ಷೇತರ ಅಥವಾ ಬಂಡು ಅಭ್ಯರ್ಥಿಗಳಾಗುವವರು ನಾಯಕರ ಮರ್ಜಿ ಕಾಯದೆ ಆಯಾ ವಾರ್ಡುಗಳ ಜನತೆ ವಿಶ್ವಾಸದೊಂದಿಗೆ ಹೋರಾಟಕ್ಕಿಳಿದಿರುವುದು ಈ ಬಾರಿಯ ವಿಶೇಷವಾಗಿದೆ. ಹೇಮಲತಾ ಶಿವಮಠ ಎಂಬವರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ 62 ನೇ ವಾರ್ಡದಿಂದ ಕಣಕ್ಕಿಳಿದಿರುವುದು ಇದಕ್ಕೆ ಸಾಕ್ಷಿ.
82 ವಾರ್ಡ್ಗಳ ಪೈಕಿ ಬಹುತೇಕ ವಾರ್ಡ್ ಗಳ ಟಿಕೆಟ್ ಅಂತಿಮಗೊಳಿಸಲಾಗಿದ್ದು, ಸೆಂಟ್ರಲ್ ಹಾಗೂ ಪೂರ್ವ ಕ್ಷೇತ್ರದಲ್ಲಿ ಒಂದೇ ವಾರ್ಡ್ ಗೆ ಹೆಚ್ಚಿನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
ಧಾರವಾಡದ ಇಸ್ಮಾಯಿಲ್ ತಮಾಟಗಾರ ಹಾಗೂ ಹುಬ್ಬಳ್ಳಿಯ ನಾಗರಾಜ್ ಗೌರಿ ಮಧ್ಯ ಮಾತಿನ ಚಕಮಕಿ ನಡೆದಿರುವುದನ್ನು ನೋಡಿದರೆ ಕಾಂಗ್ರೆಸ್ ದಲ್ಲಿ ಅಸಮಾಧಾನದ ಬೆಂಕಿ ಭುಗಿಲೇಳುವುದು ಖಚಿತ ಎಂದು ಹೇಳಬಹುದು.
Kshetra Samachara
21/08/2021 03:05 pm