ಧಾರವಾಡ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ಸಂಸದರಿಗೆ ಸಚಿವ ಸ್ಥಾನ ನೀಡಿ ಹೊಸ ಹೊಸ ಕೆಲಸಗಳನ್ನು ಮಾಡುವಂತೆ ಸೂಚಿಸಿದ್ದು, ಅವರ ಸೂಚನೆಯಂತೆ ರಾಜೀವ್ ಚಂದ್ರಶೇಖರ್ ಅವರು ಹುಬ್ಬಳ್ಳಿ ನಗರಕ್ಕೆ ಬಂದು ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಮೊದಲ ಬಾರಿಗೆ ಐಟಿಬಿಟಿ ಸಭೆ ನಡೆಸಲಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಾಳೆ ಸಂಜೆ ಹುಬ್ಬಳ್ಳಿಗೆ ಸಚಿವರು ಆಗಮಿಸಲಿದ್ದಾರೆ. ಮೊದಲು ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ನಂತರ 6.30ಕ್ಕೆ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ರಾಜೀವ್ ಚಂದ್ರಶೇಖರ ಅವರೊಬ್ಬ ದೊಡ್ಡ ಉದ್ಯಮಿ. ಇದೀಗ ಕೇಂದ್ರ ಸಚಿವರಾಗಿರುವ ಅವರು, ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್‌ನಲ್ಲಿ ಐಟಿಬಿಟಿ ಸಭೆ ನಡೆಸಲಿದ್ದಾರೆ ಎಂದರು.
ಇನ್ನು ಕವಿವಿಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸ ಮುಗಿದರೂ ಕೂಡ ಅವರಿಗೆ ಲ್ಯಾಪಟಾಪ್‌ಗಳು ಬಂದಿರಲಿಲ್ಲ. ಈ ಕುರಿತು ವಿದ್ಯಾರ್ಥಿಗಳು ಪ್ರತಿಭಟನೆ ಕೂಡ ನಡೆಸಿದ್ದರು. ನಾನೇ ಖುದ್ದಾಗಿ ಸರ್ಕಾರದಿಂದ 595 ಲ್ಯಾಪಟಾಪ್‌ಗಳು ಬರುವಂತೆ ಮಾಡಿದ್ದೇನೆ. ಇನ್ನು ಮುಂದೆ ಯಾವಾಗ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದುಕೊಳ್ಳುತ್ತಾರೋ ಆಗಲೇ ಲ್ಯಾಪಟಾಪ್ ಸಿಗುವಂತೆ ವ್ಯವಸ್ಥೆ ಜಾರಿಗೆ ತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.
Kshetra Samachara
14/08/2021 08:12 pm