ಪಬ್ಲಿಕ್ ನೆಕ್ಸ್ಟ್ ಫಾಲೋಅಪ್ ಸ್ಟೋರಿ: ಪ್ರವೀಣ ಓಂಕಾರಿ
ಧಾರವಾಡ: ಹಾ ನಮಸ್ಕಾರ್ರೀ.. ಧಾರವಾಡ ಮಂದಿಗೆ.. ಮತ್ತೇನ ಸುದ್ದಿ ತುಗೊಂಡ ಬಂದ್ರಪಾ ಅಂತಿರೆನ? ಅದ ರೀ ನಮ್ಮ ಅರವಿಂದ ಬೆಲ್ಲದ ಸಾಹೇಬರ ಕ್ಷೇತ್ರದೊಳಗ ಬರುವಂತಾ ಸೋಮೇಶ್ವರದ ಬಳಿ ನಿರ್ಮಾಣ ಆಗಿ ಈಗಾಗ್ಲೇ ಹಾಳ ಆಗ್ಯಾವಲ್ಲ ಆಶ್ರಯ ಮನಿಗೋಳ ಅದರ ಬಗ್ಗೆ ಮತ್ತೊಂದ ವಿಷಯ ತುಗೊಂಡ ಬಂದೇವಿ. ಈ ಸಲಾ ಶಾಸಕರಾದಂತಹ ಅರವಿಂದ ಬೆಲ್ಲದ ಸಾಹೇಬ್ರು ನಮಗ ಸಿಕ್ಕಿದ್ರು. ಅವ್ರು ಈ ಆಶ್ರಯ ಮನಿಗೋಳ ಸಂಬಂಧ ಒಂದು ಭರವಸೆ ಕೊಟ್ಟಾರ. ನಿಮ್ಮ ಪಬ್ಲಿಕ್ ನೆಕ್ಸ್ಟ್ ಕೂಡ ಈ ಹಿಂದ ಈ ಮನಿಗೊಳ ಸಂಬಂಧ ಸರ್ಕಾರದ ರೊಕ್ಕಾ ಹೆಂಗ ಹಾಳ ಆಗಾಕತ್ತೈತಿ ನೋಡ್ರಿ ಇಲ್ಲೆ ಅನ್ನೋ ಶೀರ್ಷಿಕೆಯಡಿಯೊಳಗ ಒಂದ ಸುದ್ದಿ ಪ್ರಸಾರ ಮಾಡಿತ್ತ. ಇದೇ ವಿಷಯಕ್ಕ ಸಂಬಂಧಪಟ್ಟಂಗ ಶಾಸಕರಾದಂತ ಅರವಿಂದ ಬೆಲ್ಲದ ಅವರನ್ನ ಮಾತಾಡಸೇವಿ ಅವರು ಏನ್ ಹೇಳ್ಯಾರ ಅಂತ ನೀವ ಕೇಳ್ರಿ.
ಹಾ ಕೇಳಿದ್ರಲ್ಲ ನಮ್ಮ ಶಾಸಕರ ಮಾತ. 2009 ರೊಳಗ ರಾಜೀವ್ ಆವಾಸ್ ಯೋಜನೆಯೊಳಗ ಈ ಮನಿಗೋಳು ನಿರ್ಮಾಣ ಆಗ್ಯಾವ. 1072 ಮನಿಗೋಳನ್ನ ಇಲ್ಲಿ ಅಪಾರ್ಟ್‌ಮೆಂಟ್ ರೀತಿಯೊಳಗ ಕಟ್ಟ್ಯಾರ್. ಅರ್ಹ ಫಲಾನುಭವಿಗಳಿಗೆ ಈ ಮನಿಗಳನ್ನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಸ್ತಾಂತರ ಮಾಡೋದಾಗಿ ಹೇಳಿ ಭಾಗಶಃ ಫಲಾನುಭವಿಗಳಿಂದ ಸರ್ಕಾರಿ ಫೀ ಕೂಡ ತುಂಬಿಸಿಕೊಂಡಾರ ಆದ್ರ ಎರಡ್ಮೂರು ವರ್ಷ ಆದ್ರೂ ಕೂಡ ಇನ್ನೂ ಫಲಾನುಭವಿಗಳಿಗೆ ಈ ಮನಿ ಹಸ್ತಾಂತರ ಆಗಿಲ್ಲ. ಈಗ ಈ ಮನಿಗೋಳ ಅವಸ್ಥೆ ನೋಡಿದ್ರ ಕೋಟಿ ಕೋಟಿ ರೊಕ್ಕಾ ಹೊಳ್ಯಾಗ ಹಾಕ್ಯಾರ ಅನ್ನೋದು ಗೊತ್ತಕ್ಕೈತಿ.
ಮನಿಗೋಳ ಬಾಗಿಲಾ, ಕಿಟಕಿ ಎಲ್ಲಾ ಮುರದ ಬಿದ್ದಾವ. ಅಪಾರ್ಟ್‌ಮೆಂಟ್ ತುಂಬ ಕಸಾ ಬೆಳದೈತಿ. ಹಿಂಗ್ ಕೋಟಿ ಕೋಟಿ ಸರ್ಕಾರದ ರೊಕ್ಕಾ ಹಾಳು ಹರಟೆ ಮಾಡ್ಯಾರ. ಈಗ ಮತ್ತೊಮ್ಮೆ ಈ ಮನಿಗೋಳನ್ನ ರಿಪೇರಿ ಮಾಡಿ ಒಂದೂವರೆ ತಿಂಗಳದಾಗ ಎಲ್ಲಾ ಮುಗಸ್ತೇವಿ ಅಂತ ನಮ್ಮ ಶಾಸಕರು ಭರವಸೆ ಕೊಟ್ಟಾರ. ನೋಡುಣ ಒಂದೂವರೆ ತಿಂಗಳ ಆದಮ್ಯಾಲರ ಅರ್ಹ ಫಲಾನುಭವಿಗಳಿಗೆ ಈ ಮನಿಗೋಳ ಹಸ್ತಾಂತರ ಅಕ್ಕಾವೋ ಇಲ್ಲೋ ಅಂತ.
Kshetra Samachara
10/08/2021 06:41 pm