ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮೇಜರ್ ಸರ್ಜರಿ: ಸುಧಾರಣೆಗೆ ಮತ್ತಷ್ಟು ಬಲ.!

ಹುಬ್ಬಳ್ಳಿ: ಕಳೆದ ಎರಡು ವರ್ಷದಿಂದ ನನೆಗುದಿಗೆ ಬಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಗೆ ಇದೀಗ ಪೂರಕ ಸಿದ್ಧತೆ ನಡೆಸುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಈ ಬೆನ್ನಲ್ಲೇ ಪಾಲಿಕೆ ವ್ಯಾಪ್ತಿಯಲ್ಲಿ ವಲಯ ಕಚೇರಿವಾರು ಮೇಜರ್ ಸರ್ಜರಿ ಆರಂಭಗೊಂಡಿದ್ದು, ಚುನಾವಣಾ ಚಟುವಟಿಕೆಗಳ ಜತೆಗೆ ಆಡಳಿತ ವ್ಯವಸ್ಥೆ ಸುಧಾರಣೆಗೆ ಮತ್ತಷ್ಟು ಬಲ ಬಂದಂತಾಗಿದೆ.

ಹೌದು. ಮಹಾನಗರ ಪಾಲಿಕೆ ಚುನಾವಣೆಯ ದೃಷ್ಟಿಕೋನದ ಜೊತೆ ಜೊತೆಗೆ ಇದೇ ವೇಳೆ ಜಡ್ಡುಗಟ್ಟಿದ ವಾತವರಣವನ್ನು ತಿಳಿಗೊಳಿಸಿ ಸುಗಮ ಆಡಳಿತ ವ್ಯವಸ್ಥೆ ರೂಪಿಸಲು ಮುಂದಾಗಿರುವ ಪಾಲಿಕೆ ಆಯುಕ್ತರು, ವಲಯ ಕಚೇರಿಯ ವಿವಿಧ ವಿಭಾಗದಲ್ಲಿ ಹಲವು ವರ್ಷಗಳಿಂದ ಬೇರೂರಿದ್ದ ಅಕಾರಿಗಳು ಮತ್ತು ಸಿಬ್ಬಂದಿಯನ್ನು ವಲಯವಾರು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.

ಎರಡು ವರ್ಷಕ್ಕೂ ಅಧಿಕ ವರ್ಷಗಳ ಕಾಲ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪಾಲಿಕೆ ಆಯುಕ್ತರು ವರ್ಗಾವಣೆಗೊಳಿಸಿದ್ದಾರೆ. ಅಲ್ಲದೇ, ಹು-ಧಾ ಮಹಾನಗರ ಪಾಲಿಕೆ ಇತಿಹಾಸದಲ್ಲಿಯೇ ಏಕಕಾಲದಲ್ಲಿ ಇಷ್ಟು ಪ್ರಮಾಣದ ಸಿಬ್ಬಂದಿ ವರ್ಗಾವಣೆಗೆ ಕ್ರಮ ಕೈಗೊಂಡಿರುವುದು ಇದೇ ಮೊದಲು. ಪಾಲಿಕೆ ವ್ಯಾಪ್ತಿಯ 12 ವಲಯ ಕಚೇರಿಯಲ್ಲೂ ಇದೀಗ ವಲಯಾಧಿಕಾರಿ ಹೊರತುಪಡಿಸಿ ಬಹುತೇಕ ಸಿಬ್ಬಂದಿ ಬದಲಾವಣೆಗೊಂಡಿರುವುದು ವಿಶೇಷ.

ಸದ್ಯ ವರ್ಗಗೊಂಡ ಬಹುತೇಕ ಸಿಬ್ಬಂದಿ ಕಳೆದ 10-15 ವರ್ಷ ಮೇಲ್ಪಟ್ಟು ಒಂದೇ ಸ್ಥಳದಲ್ಲಿಯೇ ಕಾರ್ಯನಿರ್ವಹಿಸಿದ್ದಾರೆ. ಇದರೊಟ್ಟಿಗೆ ಒಂದೇ ಸ್ಥಳದಲ್ಲಿ ನಾಲ್ಕೈದು ವರ್ಷ ಮೇಲ್ಪಟ್ಟ ಕಾರ್ಯನಿರ್ವಹಿಸಿದ ಸಿಬ್ಬಂದಿಯನ್ನು ಜೋಡಿಸಿ ವಲಯ ಕಚೇರಿಗಳ ಆಡಳಿತ ವ್ಯವಸ್ಥೆಯನ್ನೇ ಪುನರಚನೆಗೊಳಿಸಿದ್ದು ವಿಶೇಷ. ಸದ್ಯ ಎರಡು ವರ್ಷ ಮೀರದ ಸಿಬ್ಬಂದಿ ಹೊರತುಪಡಿಸಿ ಬಹುತೇಕರನ್ನು ಪಾಲಿಕೆ ಆಯುಕ್ತರು ವರ್ಗಾವಣೆಗೊಳಿಸಿದ್ದಾರೆ.

ಮಹಾನಗರ ಪಾಲಿಕೆಯಲ್ಲಿ ಸದ್ಯ 61 ಕರವಸೂಲಿಗಾರ ಸಿಬ್ಬಂದಿ, 3 ದ್ವಿತೀಯ ದರ್ಜೆ ಸಹಾಯಕರು, ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 8 ಆರೋಗ್ಯ ನಿರೀಕ್ಷಕರು, 28 ಹಿರಿಯ ಮತ್ತು ಕಿರಿಯ ಅಭಿಯಂತರರು, 4 ಸಹಾಯಕ ಕಂದಾಯ ಅಧಿಕಾರಿಗಳು, 07 ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, 5 ಹಿರಿಯ ಆರೋಗ್ಯ ನಿರೀಕ್ಷಕರು, 22 ಕಿರಿಯ ಆರೋಗ್ಯ ನಿರೀಕ್ಷಕರು ಮತ್ತು 4 ಆರೋಗ್ಯ ನಿರೀಕ್ಷಕರ ತರಬೇತಿ ಹೊಂದಿದ ದ್ವಿತೀಯ ದರ್ಜೆ ಸಹಾಯಕರನ್ನು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ. ವರ್ಗಾವಣೆಗೊಂಡ ಸಿಬ್ಬಂದಿ ಮತ್ತು ಅಕಾರಿಗಳು ತಕ್ಷಣವೇ ನಿಗದಿತ ಸ್ಥಳಕ್ಕೆ ಹಾಜರಾಗುವಂತೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.

ಸದ್ಯ ಧಾರವಾಡದಲ್ಲಿರುವ 4 ಮತ್ತು ಹುಬ್ಬಳ್ಳಿಯಲ್ಲಿರುವ 08 ವಲಯ ಕಚೇರಿಯಲ್ಲಿ ಶೇ. 95ರಷ್ಟು ಸಿಬ್ಬಂದಿಯನ್ನು ಆಯಾ ವ್ಯಾಪ್ತಿಯಲ್ಲಿಯೇ ವರ್ಗಾವಣೆ ಮಾಡಲಾಗಿದೆ. ಈ ಮಧ್ಯೆ ಹೆಚ್ಚು ವರ್ಷಗಳ ಕಾಲ ಮತ್ತು ವಿವಿಧ ಬಗೆಯ ದೂರುಗಳು ಬಂದಿರುವಂತಹ ಸಿಬ್ಬಂದಿಯನ್ನು ಆಯಾ ವ್ಯಾಪ್ತಿ ಮೀರಿ ವರ್ಗಗೊಳಿಸಲಾಗಿದೆ. ಈ ಮಧ್ಯೆಯೂ ಕೆಲ ಸಿಬ್ಬಂದಿ ರಾಜಕೀಯ ಒತ್ತಡ ತಂದು ತಮ್ಮ ವರ್ಗಾವಣೆಯನ್ನು ರದ್ದುಪಡಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಆದರೆ, ಪಾಲಿಕೆ ಆಯುಕ್ತರು ಮಾತ್ರ ಇದ್ಯಾವುದಕ್ಕೂ ಮಣೆ ಹಾಕುತ್ತಿಲ್ಲ. ಹೀಗಾಗಿ ಇದು ಕೆಲ ಸಿಬ್ಬಂದಿ ಮತ್ತು ಅಕಾರಿಗಳಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂಬುದು ವಾಸ್ತವ.

Edited By : Vijay Kumar
Kshetra Samachara

Kshetra Samachara

06/08/2021 03:28 pm

Cinque Terre

13.89 K

Cinque Terre

2

ಸಂಬಂಧಿತ ಸುದ್ದಿ