ಧಾರವಾಡ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ತಮಗೆ ಯಾವುದೇ ಸ್ಥಾನಮಾನ ಸಿಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಶಾಸಕ ಅರವಿಂದ ಬೆಲ್ಲದ, ಪಕ್ಷದ ಚೌಕಟ್ಟಿನಲ್ಲಿ ಎಲ್ಲವನ್ನೂ ಸಹಿಸಿಕೊಳ್ಳುವುದಾಗಿಯೂ ತಿಳಿಸಿದ್ದಾರೆ.
ಈ ಕುರಿತಂತೆ ಪಬ್ಲಿಕ್ ನೆಕ್ಸ್ಟ್ ಮೂಲಕ ತಮ್ಮ ನೋವು ಹಂಚಿಕೊಂಡಿರುವ ಬೆಲ್ಲದ, ಹುಬ್ಬಳ್ಳಿ, ಧಾರವಾಡ-74 ಮತಕ್ಷೇತ್ರವನ್ನು ಕಳೆದ 2 ಅವಧಿಯಿಂದ ಪ್ರತಿನಿಧಿಸುತ್ತಿದ್ದೇನೆ. ಕ್ಷೇತ್ರದ ಮತದಾರರ ಪ್ರೀತಿ-ವಿಶ್ವಾಸ, ಬೆಂಬಲದಿಂದ ಇಂದು ನನ್ನ ಹೆಸರು ರಾಜ್ಯದ ಅತ್ಯುನ್ನತ ಹುದ್ದೆಯವರೆಗೆ ಪರಿಗಣಿಸಲ್ಪಟ್ಟು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೆ ಬರುವಂತಾಗಿದೆ. ಇದು ನಿಮ್ಮೆಲ್ಲರ ಆಶೀರ್ವಾದವೇ ಸರಿ.
ರಾಜ್ಯದ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನನಗೆ ಸ್ಥಾನಮಾನ ಸಿಗದೇ ಇರುವುದು ನಿಮ್ಮೆಲ್ಲರಂತೆ ನನಗೂ ಬೇಸರ ತಂದಿದೆ. ಆದರೂ ಪಕ್ಷದ ಚೌಕಟ್ಟಿನಲ್ಲಿ ನಾನು ಇದೆಲ್ಲವನ್ನೂ ಸಹಿಸಿಕೊಳ್ಳುತ್ತೇನೆ. ಆದರೆ ನನ್ನ ಕ್ಷೇತ್ರದ ಜನರ ಸೇವೆ ಮಾಡುವಲ್ಲಿ ನನಗೆ ಇವ್ಯಾವೂ ಅಡೆತಡೆಯಾಗುವುದಿಲ್ಲ. ಶಾಸಕನಾಗಿ ಈ ಅವಧಿಯಲ್ಲಿ ಇಡೀ ರಾಜ್ಯದಲ್ಲೇ ಮೊದಲ ಬಾರಿಗೆ ನನ್ನ ಕ್ಷೇತ್ರದಲ್ಲಿ ಸುಮಾರು 6000 ಪಕ್ಕಾ ಮನೆ ನಿರ್ಮಾಣ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಸಹಕಾರದಿಂದ ಧಾರವಾಡದಲ್ಲಿ ಐಐಟಿ, ಐಐಐಟಿ ಪ್ರಾರಂಭಿಸಿದ್ದು, ಉನ್ನತ ಶಿಕ್ಷಣ ಕೇಂದ್ರ, ಹಲವು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಗ್ರಾಮೀಣ ಪ್ರದೇಶದಲ್ಲಿ ಬ್ಯಾರೇಜ್ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ನಿಮ್ಮೆಲ್ಲರ ಸಹಕಾರ, ಬೆಂಬಲದಿಂದ ಕಾರ್ಯಗತಗೊಳಿಸಿದ್ದೇನೆ.
ನನ್ನ ಅಥವಾ ನನ್ನ ಕುಟುಂಬದ ಮೇಲೆಯಾಗಲಿ ಇದುವರೆಗೆ ರಾಜಕೀಯ ಭ್ರಷ್ಟಾಚಾರದ ಒಂದೇ ಒಂದು ಕಪ್ಪುಚುಕ್ಕೆ ಬರದಂತೆ ನನ್ನನ್ನು ನೀವು ನಡೆಸಿಕೊಂಡಿದ್ದು ನನ್ನ ಸೌಭಾಗ್ಯವೇ ಸರಿ. ಶಾಸಕನಾಗಿ ಇನ್ನಷ್ಟು ನಿಮ್ಮ ಸೇವೆ ಮಾಡಲು ನಾನು ಸಿದ್ಧನಿದ್ದೇನೆ. ಕ್ಷೇತ್ರದ ಜನರ ಸಮಸ್ಯೆ ಬಗೆಹರಿಸುವ ಕಾಯಕದ ಜತೆಗೆ ನಾನು ನಂಬಿಕೊಂಡು ಬಂದ ಸಿದ್ಧಾಂತ, ಸ್ವಚ್ಛ ಮತ್ತು ಭ್ರಷ್ಟಾಚಾರ ರಹಿತ ರಾಜಕೀಯ ಅನುಷ್ಠಾನಕ್ಕೆ ಬದ್ಧನಿದ್ದೇನೆ. ಅಲ್ಲದೇ, ಭ್ರಷ್ಟಾಚಾರಿಗಳ ವಿರುದ್ಧ ಈ ಹಿಂದಿನಂತೆಯೇ ಧ್ವನಿ ಎತ್ತುತ್ತೇನೆ.
ಇದಕ್ಕೆ ನಿಮ್ಮೆಲ್ಲರ ಸಹಕಾರ ಸದಾ ಇರುತ್ತದೆ ಎಂದು ನಂಬಿರುತ್ತೇನೆ. ಏನೇ ಬರಲಿ ಎಲ್ಲರೂ ಒಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ. ಧಾರವಾಡ ಕ್ಷೇತ್ರ ಶಿಕ್ಷಣ ಕಾಶಿ, ಸುಸಂಸ್ಕೃತ ಕ್ಷೇತ್ರ. ಹೀಗಾಗಿ ನನಗೆ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಈ ಕೊರೊನಾ ಸಂದರ್ಭದಲ್ಲಿ ಯಾರೂ ಕೂಡ ಬೀದಿಗಿಳಿದು ಪ್ರತಿಭಟನೆ ನಡೆಸಬಾರದೆಂದು ವಿನಂತಿಸಿಕೊಳ್ಳುತ್ತೇನೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೂ ಮತ್ತು ಸಂಪುಟದ ಎಲ್ಲಾ ಸ್ನೇಹಿತರಿಗೂ ನಾನು ಶುಭಾಶಯ ಕೋರುತ್ತೇನೆ. ನರೇಂದ್ರ ಮೋದಿಯವರ ಕನಸಿನಂತೆ ಕರ್ನಾಟಕ ತನ್ಮೂಲಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸೋಣ ಎಂದು ಭಗವಂತ ಹಾಗೂ ತಮ್ಮಲ್ಲಿ ಪ್ರಾರ್ಥಿಸುತ್ತೇನೆ.
ಜೀವನದಲ್ಲಿ ಸೋಲು, ಗೆಲುವು ಶಾಶ್ವತವಲ್ಲ. ದೇವರು ಎಲ್ಲವನ್ನೂ ಸಮಯಕ್ಕೆ ತಕ್ಕಂತೆ ಒದಗಿಸುತ್ತಾನೆ. ಈಗಿರುವ ಸಂದರ್ಭದಲ್ಲಿ ಶಾಸಕನಾಗಿ, ನಿಮ್ಮೆಲ್ಲರ ಸ್ನೇಹಿತನಾಗಿ ಈ ಕ್ಷೇತ್ರದ ಕೆಲಸವನ್ನು ಮೊದಲಿನಂತೆ ಮಾಡಲು ನಾನು ಸದಾ ಸಿದ್ಧನಿದ್ದೇನೆ ಎಂದು ಬೆಲ್ಲದ ಪಬ್ಲಿಕ್ ನೆಕ್ಸ್ಟ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
Kshetra Samachara
05/08/2021 07:19 pm