ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲಾ ಮಂತ್ರಿಗಿರಿ ಯಾರಿಗೆ?

ಧಾರವಾಡ: ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಈಗ ಧಾರವಾಡ ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಯಾರಿಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕಾಟದಲ್ಲಿದ್ದಾರೆ ಬಿಜೆಪಿ ಪಕ್ಷದ ವರಿಷ್ಠರು.

ಸಿಎಂ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದ ಹುಬ್ಬಳ್ಳಿ, ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅವರಿಗೆ ಕೊನೆ ಕ್ಷಣದಲ್ಲಿ ಸಿಎಂ ಸ್ಥಾನ ಕೈತಪ್ಪಿದೆ. ಒಂದು ಹಂತದಲ್ಲಿ ಅರವಿಂದ ಬೆಲ್ಲದ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲಾಗಿತ್ತು. ಆದರೆ, ಇದೀಗ ಸಿಎಂ ಸ್ಥಾನ ಕೈತಪ್ಪಿರುವುದರಿಂದ ಬೆಲ್ಲದ ಅವರು, ಮಂತ್ರಿಗಿರಿಗಾಗಿ ತೀವ್ರ ಲಾಬಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಆರ್‌ಎಸ್ಎಸ್‌ ವರಿಷ್ಠರೊಂದಿಗೆ ಉತ್ತಮ ನಿಕಟ ಸಂಪರ್ಕ ಹೊಂದಿರುವ ಬೆಲ್ಲದ ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ರಾಜಕಾರಣ ಮಾಡಿದವರು. ಅವರ ತಂದೆಯ ತರುವಾಯ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು ಬೆಲ್ಲದ.

ಈಗಾಗಲೇ ಮಾಜಿ ಸಚಿವ ಜಗದೀಶ ಶೆಟ್ಟರ್ ಕೂಡ ಬೊಮ್ಮಾಯಿ ಮಂತ್ರಿಮಂಡಲದಲ್ಲಿ ಸಚಿವನಾಗಿರುವುದಿಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬೆಲ್ಲದ ಅವರೇ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಬಹುದು ಎನ್ನಲಾಗುತ್ತಿದೆ. ಆದರೆ, ಇದು ಅಷ್ಟು ಸರಳವಾಗಿಲ್ಲ. ಏಕೆಂದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡವರು ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ. ಬೊಮ್ಮಾಯಿ ಅವರ ಜೊತೆಗೆ ಜನತಾ ಪರಿವಾರ ತೊರೆದು ಬಿಜೆಪಿ ಸೇರಿದ ಮುನೇನಕೊಪ್ಪ ಎರಡು ಬಾರಿ ನವಲಗುಂದ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬೊಮ್ಮಾಯಿ ಜೊತೆ ಕಳಸಾ-ಬಂಡೂರಿ ಹೋರಾಟದಲ್ಲಿ ಮುನೇನಕೊಪ್ಪ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಬೆಲ್ಲದ ಹಾಗೂ ಮುನೇನಕೊಪ್ಪ ಅವರ ಮಧ್ಯೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆದಿದೆ ಎನ್ನಲಾಗುತ್ತಿದೆ. ಇತ್ತ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೂ ಉತ್ತಮ ಸಂಬಂಧ ಹೊಂದಿರುವ ಮುನೇನಕೊಪ್ಪ ಈ ಹಿಂದೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.

ಇನ್ನು ಅರವಿಂದ ಬೆಲ್ಲದ ಬಗ್ಗೆ ಹೇಳುವುದಾದರೆ, ಕ್ಲೀನ್ ಇಮೇಜ್ ಇಟ್ಟುಕೊಂಡಿರುವ ಬೆಲ್ಲದ, ಸಂಘ ಪರಿವಾರದ ಮುಖಂಡರ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಇದೀಗ ಬೊಮ್ಮಾಯಿ ಮುಖ್ಯಮಂತ್ರಿಯಾದರೂ ಬೆಲ್ಲದ ಸುಮ್ಮನೆ ಕೂತಿಲ್ಲ. ಮಂತ್ರಿಗಿರಿಗಾಗಿ ಪಕ್ಷದ ವರಿಷ್ಠರೊಂದಿಗೆ ಫೋನ್ ಮೂಲಕ ನಿರಂತರ ಸಂಪರ್ಕದಲ್ಲೇ ಇದ್ದಾರೆ. ಅವಶ್ಯಕತೆ ಬಿದ್ದರೆ ದೆಹಲಿಗೂ ಹೋಗಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಧಾರವಾಡ ಜಿಲ್ಲೆಯ ನೂತನ ಸಾರಥಿ ಯಾರು ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದ್ದು, ಬಿಜೆಪಿ ವರಿಷ್ಠರು ಶಂಕರನಿಗೆ ಜೈ ಎನ್ನುತ್ತಾರೆ ಅಥವಾ ಬೆಲ್ಲದಗೆ ಮನೆ ಹಾಕುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್ ಧಾರವಾಡ.

Edited By : Shivu K
Kshetra Samachara

Kshetra Samachara

30/07/2021 12:21 pm

Cinque Terre

20.25 K

Cinque Terre

6

ಸಂಬಂಧಿತ ಸುದ್ದಿ