ಹುಬ್ಬಳ್ಳಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯ ಪ್ರವಾಸದಲ್ಲಿದ್ದು, ಅವರು ಹುಬ್ಬಳ್ಳಿಯಲ್ಲಿ ವಿಭಾಗೀಯ ಮಟ್ಟದ ಸಭೆ ನಡೆಸುವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಏರ್ಪಡಿಸಿ ಮಾತನಾಡಿದ ಅವರು, ಜುಲೈ 29,30,31 ರವರೆಗೆ ರಾಜ್ಯದಲ್ಲಿ ಪ್ರವಾಸದಲ್ಲಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ಜುಲೈ 29 ರಂದು ಸಂಜೆ 6 ಗಂಟೆಯಿಂದ ಹಾವೇರಿ ಹಾಗೂ ವಿಜಯಪುರ ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, 2019 ರ ಲೋಕಸಭಾ ಅಭ್ಯರ್ಥಿಗಳು, ಶಾಸಕರು ಮತ್ತು 2018 ರ ವಿಧಾನಸಭಾ ಅಭ್ಯರ್ಥಿಗಳು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ 2 ಜಿಲ್ಲೆಯ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.
ಜುಲೈ 30 ರಂದು ಬೆಳಿಗ್ಗೆ 9:30 ರಿಂದ ಸಂಜೆ 7 ರವರೆಗೆ ಹು-ಧಾ, ಬಾಗಲಕೋಟೆ, ಹಾವೇರಿ, ಬಿಜಾಪುರ, ಬೆಳಗಾವಿ ಮತ್ತು ಗದಗ ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, 2019 ರ ಲೋಕಸಭಾ ಅಭ್ಯರ್ಥಿಗಳು, 2018 ರ ಶಾಸಕರು ಮತ್ತು ವಿಧಾನಸಭಾ ಅಭ್ಯರ್ಥಿಗಳು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು, ಮಾಜಿ ಸಂಸದರು, ರಾಜ್ಯ ಮತ್ತು ಜಿಲ್ಲಾ ಮುಂಚೂಣಿ ಘಟಕ, ವಿಭಾಗ ಸೆಲ್ ಗಳ ಪ್ರಧಾನರುಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಇದೇ ತೆರನಾಗಿ ಜುಲೈ 31 ರಂದು ಬೆಳಿಗ್ಗೆ 9:30 ರಿಂದ ಸಂಜೆ 5 ಕ್ಕೆ ಮೈಸೂರಿನಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಮತ್ತು ರಾಮನಗರ ಜಿಲ್ಲೆಗಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, 2019 ರ ಸಂಸದರು, ಲೋಕಸಭಾ ಅಭ್ಯರ್ಥಿಗಳು, ಸೇರಿದಂತೆ ರಾಜ್ಯದ ಮುಂಚೂಣಿ ಘಟಕ ವಿಭಾಗ ಮತ್ತು ಸೆಲ್ ಗಳ ಪ್ರಧಾನರ ಜೊತೆಗೆ ಜಿಪಂ, ತಾಪಂ, ವಿಧಾನ ಪರಿಷತ್ ಚುನಾವಣೆಗಳ ಜತೆಗೆ ಸಿಂದಗಿ ಮತ್ತು ಹಾನಗಲ್ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಕುರಿತು ಚರ್ಚೆ ನಡೆಸುವರು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ತಿಳಿಸಿದ್ದಾರೆ.
ಇನ್ನು, ಈ ಸಭೆಗೆ ರಾಜ್ಯದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್ ಸೇರಿದಂತೆ ಪಕ್ಷದ ಇನ್ನಿತರ ಮುಖಂಡರು ಭಾಗಿಯಾಗಲಿದ್ದು, ಜುಲೈ 30 ರಂದೇ ಮಧು ಬಂಗಾರಪ್ಪ ಅವರು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪ್ರಸಾದ್ ಅಬ್ದುಲ್, ಶಾಸಕಿ ಕುಸುಮಾವತಿ ಶಿವಳ್ಳಿ, ಅನಿಲಕುಮಾರ ಪಾಟೀಲ್, ಎ.ಎಮ್.ಹಿಂಡಸಗೇರಿ, ಶ್ರೀನಿವಾಸ ಮಾನೆ, ಇಸ್ಮಾಯಿಲ್ ತಮಟಗಾರ, ನಾಗರಾಜ್ ಛಬ್ಬಿ, ರಜತ್ ಉಳ್ಳಾಗಡ್ಡಿಮಠ, ಸದಾನಂದ ದಂಡನವರ ಸೇರಿದಂತೆ ಮುಂತಾದವರು ಇದ್ದರು.
Kshetra Samachara
28/07/2021 04:18 pm