ಧಾರವಾಡ: ಎಂಜಿನಿಯರ್, ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಿ

ಧಾರವಾಡ: ಕೆರೆಯನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಧಾರವಾಡದ ಪ್ರಸಿದ್ಧ ಸೋಮೇಶ್ವರ ಕೆರೆಯಲ್ಲಿದ್ದ ನೀರನ್ನು ಖಾಲಿ ಮಾಡಿರುವ ಗುತ್ತಿಗೆದಾರ ಹಾಗೂ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು, ಜಿಲ್ಲಾಧ್ಯಕ್ಷ ಸುಧೀರ ಮುಧೋಳ ನೇತೃತ್ವದಲ್ಲಿ ಸೋಮೇಶ್ವರ ಕೆರೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಕೆರೆ ರಾಜೀವಗಾಂಧಿನಗರದ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಸುಡುಗಾಡು ಸಿದ್ಧರ ಕಾಲೊನಿಯ ಜನರಿಗೆ ಜೀವಜಲ ಹಾಗೂ ಮೀನುಗಾರರಿಗೆ ಜೀವನಾಡಿಯಾಗಿತ್ತು. ಆದರೆ, ಗುತ್ತಿಗೆದಾರ ಕೆರೆಯಲ್ಲಿನ ಅಂತರಗಂಗೆ ತೆಗೆಯುವ ನೆಪದಲ್ಲಿ ಕೆರೆಯಲ್ಲಿದ್ದ ಎಲ್ಲಾ ನೀರನ್ನು ಖಾಲಿ ಮಾಡಿ ಪ್ರಾಣಿ, ಪಕ್ಷಿಗಳಿಗೆ ಹಾಗೂ ಜಲಚರಗಳಿಗೆ ಸಂಚಕಾರ ತಂದೊಡ್ದಿದ್ದಾರೆ.

ಉಣಕಲ್ ಕೆರೆಯಲ್ಲಿ ಸಾಕಷ್ಟು ಅಂತರಗಂಗೆ ಬೆಳೆದರೆ ಅದನ್ನು ಮಶಿನ್ ಮೂಲಕ ತೆಗೆಯಲಾಗುತ್ತದೆ. ಆದರೆ, ಇಲ್ಲಿ ಆ ರೀತಿಯ ಉಪಕರಣಗಳನ್ನು ಬಳಸದೇ ಇಂತಹ ಬೇಸಿಗೆ ಸಂದರ್ಭದಲ್ಲಿ ಕೆರೆಯಲ್ಲಿನ ಎಲ್ಲಾ ನೀರನ್ನು ಖಾಲಿ ಮಾಡಿ ಅವೈಜ್ಞಾನಿಕವಾಗಿ ನಡೆದುಕೊಳ್ಳಲಾಗಿದೆ. ಆದ್ದರಿಂದ ಇದನ್ನು ಗುತ್ತಿಗೆ ಪಡೆದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಹಾಗೂ ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Kshetra Samachara

Kshetra Samachara

10 days ago

Cinque Terre

22.73 K

Cinque Terre

0