ಧಾರವಾಡ: ನೀರಿನ ಬಿಲ್ ಮನ್ನಾ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಶಾಸಕ ಅಮೃತ ದೇಸಾಯಿ ಅವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಧಾರವಾಡದ ಮಲಪ್ರಭಾನಗರದಲ್ಲಿರುವ ಶಾಸಕ ಅಮೃತ ಅವರ ಮನೆಗೆ ಧಿಕ್ಕಾರ ಕೂಗುತ್ತ ಬಂದ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಬಿಜೆಪಿ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ ಎಂದು ಆರೋಪಿಸಿದರು.
ನೀರಿನ ಬಿಲ್ ಮನ್ನಾ ಮಾಡಲಾಗುವುದು ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಆ ಕೆಲಸ ರಾಜ್ಯ ಸರ್ಕಾರದಿಂದ ಆಗಲಿಲ್ಲ. ಈಗ ಅಸಲಿಗಿಂತ ನೀರಿನ ಬಿಲ್ ಮೇಲಿನ ಬಡ್ಡಿಯೇ ಹೆಚ್ಚಾಗಿದೆ. ಇದು ಜನ ಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಕೂಡಲೇ ರಾಜ್ಯ ಸರ್ಕಾರ ಬರುವ ಬಜೆಟ್ ನಲ್ಲಿ ಹುಬ್ಬಳ್ಳಿ, ಧಾರವಾಡದಲ್ಲಿರುವ ನೀರಿನ ಬಿಲ್ ಮನ್ನಾ ಮಾಡುವಂತೆ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಒತ್ತಾಯ ಮಾಡಿದರು.
ಈ ವೇಳೆ ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಹಾಗೂ ಉಪನಗರ ಠಾಣೆ ಇನ್ ಸ್ಪೆಕ್ಟರ್ ಯಲಿಗಾರ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಮ್ಮನ್ನು ಒಳಗಡೆ ಏಕೆ ಬಿಡುತ್ತಿಲ್ಲ. ನಿಮ್ಮ ಶಾಸಕರು ದಬ್ಬಾಳಿಕೆ ಮಾಡಿ ಎಂದು ಹೇಳಿದ್ದಾರಾ? ಎಂದು ದೀಪಕ್ ಅವರು ಇನ್ ಸ್ಪೆಕ್ಟರ್ ಅವರನ್ನು ಪ್ರಶ್ನಿಸಿದರು. ನೀವು ಪ್ರತಿಭಟನೆಗೆ ಪರವಾನಿಗಿಯನ್ನೇ ಪಡೆದಿಲ್ಲ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಇನ್ ಸ್ಪೆಕ್ಟರ್ ಯಲಿಗಾರ ಉತ್ತರಿಸಿದರು.
ನಂತರ ಶಾಸಕ ಅಮೃತ ಅವರೇ ಸ್ವತಃ ಹೊರಗಡೆ ಬಂದು ಕಾಂಗ್ರೆಸ್ ಕಾರ್ಯಕರ್ತರ ಅಹವಾಲು ಆಲಿಸಿ, ಮನವಿ ಪಡೆದರು.
Kshetra Samachara
28/02/2021 03:10 pm