ಧಾರವಾಡ : ಸಾರ್ವಜನಿಕರು ಹಾಗೂ ಯುವ ಸಮೂಹದಲ್ಲಿ ಅಪರಾಧ ತಡೆ ಹಾಗೂ ಕೋವಿಡ್ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಕಾನೂನುಗಳನ್ನು ಪ್ರತಿಯೊಬ್ಬರೂ ಅರಿತು ಅಳವಡಿಸಿಕೊಳ್ಳಬೇಕು. ಸಂಗೀತ ,ಸಾಂಸ್ಕೃತಿಕ ಚಟುವಟಿಕೆಗಳು ಮನಸ್ಸನ್ನು ಪರಿವರ್ತಿಸಲು ಪೂರಕ ಎಂದುಜೆ.ಎಸ್.ಎಸ್.ಮಹಾವಿದ್ಯಾಲಯದ ಪ್ರಾಚಾರ್ಯ ಹಾಗೂ ವಿತ್ತಾಧಿಕಾರಿಗಳಾದ ಡಾ.ಅಜಿತ್ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿಯ ಜೆ.ಎಸ್.ಎಸ್.ಕಾಲೇಜಿನ ಉತ್ಸವ ಸಭಾಂಗಣದಲ್ಲಿ ಇಂದು ನಾದ ಝೇಂಕಾರ ಸಾಂಸ್ಕೃತಿಕ ಸಂಘ,ಶ್ರೀಗುರು ಸಂಗೀತ ಪಾಠಶಾಲೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಅಪರಾಧ ತಡೆ,ಕೋವಿಡ್ ಜಾಗೃತಿಗಾಗಿ ಸುಗಮ ಸಂಗೀತ ಹಾಗೂ ಜಾನಪದ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮನಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಮುಖ್ಯ ಅತಿಥಿಗಳಾಗಿದ್ದ ಹುಬ್ಬಳ್ಳಿ ಧಾರವಾಡ ಪೂರ್ವ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯಸ್ವಾಮಿ ನಾಲತ್ವಾಡಮಠ,ಕರ್ನಾಟಕ ವಿ.ವಿ.ಇ ಪ್ರಾಚ್ಯವಸ್ತು ಸಂಗ್ರಹಾಲಯದ ಕನ್ನಡ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ.ಎಸ.ಕೆ.ಮೇಲಕಾರ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ ಮತ್ತಿತರರು ಮಾತನಾಡಿದರು.
ಜೆ ಎಸ್ ಎಸ್ ಕಾಲೇಜು ಡಾ.ಜಿ.ಕೃಷ್ಣಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ್ ಅವರಿಗೆ ಸನ್ಮಾನಿಸಿ , ಗೌರವಿಸಲಾಯಿತು.
ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಅನಿತಾ ಆರ್, ಫಕೀರಪ್ಪ ಮಾದನಭಾವಿ, ಸುರೇಶ ನಿಡಗುಂದಿ, ಆರ್.ಬಿ.ಪಾಟೀಲ, ಯಮನಪ್ಪ ಜಾಲಗಾರ ಮತ್ತಿತರ ಕಲಾವಿದರಿಂದ ಕೋವಿಡ್ ಜಾಗೃತಿ ಹಾಗೂ ಸುಗಮ ಸಂಗೀತ ,ಜನಪದ ಸಂಗೀತ ಕಾರ್ಯಕ್ರಮಗಳು ಜರುಗಿದವು.ಉದ್ಯಮಿ ವಿಠ್ಠಲ ಬಸಲಿಗುಂದಿ, ರಮೇಶ್ ಕುಂಬಾರ್, ಡಾ.ಜಿನದತ್ತ ಹಡಗಲಿ,ಡಾ.ರತ್ನಾ ವಿ.ಐರಸಂಗ್, ಅನಿತಾ ಆರ್ , ಯಮನಪ್ಪ ಜಾಲಗಾರ ಮತ್ತಿತರರು ಇದ್ದರು.
Kshetra Samachara
13/02/2021 07:04 pm