ಹುಬ್ಬಳ್ಳಿ: ರಾಚಯ್ಯ ಚನ್ನಯ್ಯ ಚಿಕ್ಕಮಠ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರೌಢಶಾಲೆ ವಿಭಾಗವನ್ನು ಆರಂಭಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಪ್ರಸ್ತಾಪ ಮಾಡಿದ್ದೇನೆ. ಸರ್ಕಾರದ ಹಣಕಾಸು ಸ್ಥಿತಿಯನ್ನು ನೋಡಿಕೊಂಡು ಹೊಸದಾಗಿ ಪ್ರೌಢಶಾಲೆ ಆರಂಭಿಸಲು ಅನುಮೋದನೆ ನೀಡುವುದಾಗಿ ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶಾಲಾ ಆವರಣದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್ ಸಾರ್ವಜನಿಕ ಹೊಣೆಗಾರಿಕೆ ನಿಧಿಯಡಿ (ಸಿ.ಎಸ್.ಆರ್) 75 ಲಕ್ಷ ರೂ. ವೆಚ್ಚದಲ್ಲಿ 6 ಹೊಸ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇನೆ. ರಾಚಯ್ಯ ಚನ್ನಯ್ಯ ಚಿಕ್ಕಮಠ ಸರ್ಕಾರಿ ಪಾಥಮಿಕ ಶಾಲೆಯನ್ನು ದತ್ತು ತೆಗೆದುಕೊಂಡು ಶಾಸಕರ ಮಾದರಿ ಶಾಲೆಯನ್ನಾಗಿ ಮಾಡಲಾಗಿದೆ. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರ ಪ್ರಯತ್ನದಿಂದಾಗಿ ಕೋಲ್ ಇಂಡಿಯಾ ಲಿಮಿಟೆಡ್ ಸಿ.ಎಸ್.ಆರ್. ನಿಧಿಯನ್ನು ಶಾಲೆ ನೀಡಿದೆ. ನಿರ್ಮಾತೃಗಳು ನಿಗದಿತ ಅವಧಿಯಲ್ಲಿ ಕೊಠಡಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ನಿರ್ಮಿಸಲಿದ್ದಾರೆ. ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸಿ.ಎಸ್.ಆರ್. ನಿಧಿಯಡಿ ಮಕ್ಕಳು ಕುಳಿತು ಕೊಳ್ಳಲು ಡೆಸ್ಕ್‌ಗಳನ್ನು ನೀಡಲಾಗಿದೆ. ಉಣಕಲ್ ಪಿ.ಯು ಕಾಲೇಜು ಕಾಂಪೌಡ್ ನಿರ್ಮಾಣಕ್ಕೆ 10 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಗೋಪನಕೊಪ್ಪ ಸರ್ಕಾರಿ ಪಾಠ ಶಾಲೆಯಲ್ಲಿ ದುಸ್ಥಿತಿಯಲ್ಲಿ ಇದ್ದ ಕೊಠಡಿಗಳನ್ನು ಕೆಡವಿ ಹೊಸ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಹು-ಧಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಮಾಜಿ ಮಹಾಪೌರರಾದ ಅಶ್ವಿನಿ ಮಜ್ಜಿಗೆ, ಮಾಜಿ ಸದಸ್ಯರುಗಳಾದ ರಾಜಣ್ಣ ಕೊರವಿ, ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೇದಾರನಾಥ ಕಬಾಡಗಿ, ಮುಖ್ಯ ಶಿಕ್ಷಕಿ ಗೀತಾ ಚುಳಕಿ, ಮುಖಂಡರಾದ ತಿಪ್ಪಣ ಮಜ್ಜಗಿ ಸೇರಿದಂತೆ ಮತ್ತಿರರು ಇದ್ದರು.
Kshetra Samachara
31/01/2021 04:50 pm