ಹುಬ್ಬಳ್ಳಿ: ಸಾಮಾಜಿಕ ಹಕ್ಕುಗಳಿಂದ ವಂಚಿತರಾಗಿರುವ ಕ್ಷೇತ್ರದ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದ್ದೇನೆ. ಈ ಸಮುದಾಯಗಳು ಮುನ್ನಲೆಗೆ ಬರಬೇಕು. ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಹಳೇ ಹುಬ್ಬಳ್ಳಿ ಶಿವಶಂಕರ ಕಾಲೋನಿ ಸಮುದಾಯ ಭವನದಲ್ಲಿ, ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಉನ್ನತಿಗೆ ಹಿಂದುಳಿದ ವರ್ಗಗಳ ಇಲಾಖೆಯಲ್ಲಿನ ಇರುವ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳು ಜಾರಿಗೊಳಿಸಿದೆ. ಅಂಬೇಡ್ಕರ್ ಹಾಗೂ ದೇವರಾಜ ಅರಸು ಕಲ್ಪನೆಯಂತೆ ಎಲ್ಲಾ ಸಮುದಾಯಗಳು ಪ್ರಾತಿನಿಧ್ಯ ಪಡೆದುಕೊಳ್ಳಬೇಕು. ಸಾಮಾಜಿಕ ನ್ಯಾಯ ಹಾಗೂ ಸಮಾನತೆ ಬಂದಾಗಲೇ ದೇಶ ಅಭಿವೃದ್ಧಿಯಾಗುತ್ತದೆ. ದೇಶದ ಸಂಪತ್ತು ಕೆಲವು ಜನರಲ್ಲಿ ಕ್ರೂಢೀಕರಣವಾಗದೆ ಎಲ್ಲರಿಗೂ ಹಂಚಿಕೆಯಾಗಬೇಕು. ಬಂಡವಾಳ ಶಾಹಿಗಳ ಹಿಡಿತಕ್ಕೆ ದೇಶ ಸಿಲುಕಬಾರದು. ದೇಶದ ಸಂಪತ್ತಿನ ಶೇ.70 ರಷ್ಟುಭಾಗ ದೇಶದ ಒಟ್ಟು ಜನಸಂಖ್ಯೆ ಶೇ.3 ರಷ್ಟು ಜನರ ಕೈಯಲ್ಲಿದೆ.ಇದು ಆರ್ಥಿಕ ಅಸಮಾನತೆಯಾಗಿದೆ. ಬಹುತೇಕ ಅಲೆಮಾರಿ ಸಮುದಾಯದವರು ದಿನಂಪ್ರತಿ ದುಡಿದು ತಿನ್ನುವವರು. ಇವರಿಗೆ ಮೂಲಭೂತ ಅವಶ್ಯಕತೆಗಳಾದ ಮನೆ, ಶಿಕ್ಷಣ, ಆರೋಗ್ಯ ಸೇವೆಗಳು ಸಮಪರ್ಕವಾಗಿ ದೊರಕುತ್ತಿಲ್ಲ. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೊಣೆ. ಸರ್ಕಾರ ಈ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸಬೇಕು. ಕಣ್ಣು ಒರೆಸುವ ಸಲುವಾಗಿ ಹೆಸರಿಗಷ್ಟೇ ಯೋಜನೆಗಳನ್ನು ಜಾರಿ ಮಾಡಬಾರದು. ಸರ್ಕಾರ ಮತ್ತು ಆಡಳಿತಯಂತ್ರ ಇರುವುದು ದೀನ ದಲಿತರ ಉದ್ಧಾರಕ್ಕಾಗಿ ಎಲ್ಲಾ ಸೇವೆಗಳು ಖಾಸಗೀಕರಣ ಮಾಡುವುದರಲ್ಲಿ ಅರ್ಥವಿಲ್ಲ. ಶಿಕ್ಷಣವೊಂದೆ ಅಲೆಮಾರಿಗಳನ್ನು ಶೋಷಣೆಯಿಂದ ರಕ್ಷಿಸುತ್ತದೆ. ಆಸ್ತಿಗಳನ್ನು ಗಳಿಸುವುದರ ಜೊತೆಗೆ, ಮಕ್ಕಳಿಗೂ ಶಿಕ್ಷಣ ನೀಡಿ ಅವರನ್ನು ಆಸ್ತಿಯನ್ನಾಗಿ ರೂಪಿಸಬೇಕು ಎಂದರು.
ಹಿಂದುಳಿದ ವರ್ಗಗಳ ಇಲಾಖೆಯಿಂದ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಅಲೆಮಾರಿಗಳ ಸಮೀಕ್ಷೆ ಕಾರ್ಯ ಕೈಗೊಳ್ಳಿ. ಯೋಜನೆಗಳ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಅವುಗಳನ್ನು ಮನೆಬಾಗಿಲುಗಳಿಗೆ ತೆರಳಿ ಅನುಷ್ಠಾನಗೊಳಿಸಿ. ಕ್ಷೇತ್ರದ ಅಲೆಮಾರಿಗಳ ಕುರಿತಾಗಿ ಪ್ರಗತಿ ಪರಿಶೀಲನಾ ಸಭೆಯನ್ನು ಪ್ರತ್ಯೇಕವಾಗಿ ಕೈಗೊಳ್ಳುತ್ತೇನೆ. ಯೋಜನೆಗಳ ಅನುಷ್ಠಾನದ ವರದಿ ತಯಾರಿಸಿ ಎಂದು ಅಧಿಕಾರಿಗಳಿಗೆಗೆ ಸೂಚಿಸಿದರು.
ವಿಸ್ತರಣಾಧಿಕಾರಿ ಸುರೇಶ್ ಗುರಣ್ಣವರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುಳಿದ ವರ್ಗಗಳ ಇಲಾಖೆಯಿಂದ 40 ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳನ್ನು ಗುರುತಿಸಲಾಗಿದೆ. ಇಲಾಖೆಯಲ್ಲಿ 2007 ರಲ್ಲಿ ಪ್ರತ್ಯೇಕ ಕೋಶ ಆರಂಭಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಯೋಜನೆ ರೂಪಿಸಲಾಗಿದೆ. ಪ್ರಾಥಮಿಕ ಹಾಗೂ ಫ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಮುದಾಯದ ವಿದ್ಯಾರ್ಥಿಗಳಿಗೆ ಹತ್ತು ತಿಂಗಳ ಅವಧಿಗೆ ವಿಶೇಷ ಪ್ರೋತ್ಸಾಹ ಧನ, ಮೆಟ್ರಿಕ್ ನಂತರದ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅರ್ಹತಾ ವಿದ್ಯಾರ್ಥಿ ವೇತನ, ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ಅಲೆಮಾರಿ ಮನೆ ನಿರ್ಮಿಸಲು 1.20 ಲಕ್ಷ ಸಹಾಯಧನ,ಅಲೆಮಾರಿ ಜನಾಂಗಗಳಿಗೆ ನಿವೇಶನ ಹಂಚಿಕೆ ಮಾಡಲು ಜಮೀನು ಖರೀದಿಗೆ ಯೋಜನೆ ರೂಪಿಸಲಾಗಿದೆ ಎಂದರು.
Kshetra Samachara
09/01/2021 03:54 pm