ಕುಂದಗೋಳ : ಗ್ರಾಮ ಗ್ರಾಮಗಳಲ್ಲಿನ ಮಿನಿ ಅಖಾಡವೆಂದೇ ಹೆಸರಾಗಿರುವ ತಾಲೂಕಿನ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯ ಕಂಡು ವಿಜಯರಾದ ಅಭ್ಯರ್ಥಿಗಳು ಪಂಚಾಯಿತಿಯ ಸದಸ್ಯತ್ವ ಸ್ವಿಕರಿಸಿ ನಿಟ್ಟುಸಿರು ಬಿಡುವ ಮೊದಲೇ ಮತ್ತೊಂದು ಢವ ಢವ ಶುರುವಾಗಿದೆ.
ಇದೇನಪ್ಪಾ ಅಂದ್ರಾ ! ಇದೇ ಸ್ವಾಮಿ ಲಕ್ಷ ಲಕ್ಷ ಖರ್ಚು ಮಾಡಿ ಪಂಚಾಯ್ತಿ ಸೀಟ್ ಗೆದ್ದ ಸದಸ್ಯರಲ್ಲಿ ಮತ್ತಿಗ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಪೈಪೊಟಿ ಜೋರಾಗಿದೆ.
ಕೆಲ ಲಕ್ಷ್ಮೀ ಪುತ್ರರೂ ತಮಗೆ ಅಧ್ಯಕ್ಷ ಸ್ಥಾನ ನೀಡುವಂತೆ ಉಳಿದ ಸದಸ್ಯರಿಗೆ ಆಫರ್ ನೀಡಿ ಹೊಂದಾಣಿಕೆ ಮಾಡಿಕೊಳ್ಳುವ ಮಾತು, ಪಕ್ಷವಾರು ಪ್ರಾಬಲ್ಯದ ಮಾತು ಕೇಳಿ ಬರುತ್ತಿವೆ. ಕೆಲ ಸದಸ್ಯರು ಮೀಸಲಾತಿ ಪ್ರಕಟದ ಮೊದಲೇ ತಮ್ಮ ಅಂದಾಜಿನ ಅನುಸಾರ ಇದೇ ಮೀಸಲಾತಿ ಬರುತ್ತೆ ನಮಗೆ ಅಧಿಕಾರ ಸಿಗುತ್ತೆ ಎಂದು ತುಸು ಹೆಚ್ಚಿಗೆ ವರ್ಚಸ್ಸು ತೋರುತ್ತಿದ್ದಾರೆ.
ತಾಲೂಕಿನಲ್ಲಿ ಚುನಾವಣೆ ನಡೆದ 23 ಗ್ರಾಮ ಪಂಚಾಯಿತಿಗಳ ಪೈಕಿ ಕೆಲ ಬಹು ಸಂಖ್ಯೆಯ ಸದಸ್ಯರನ್ನು ಹೊಂದಿದ ಪಂಚಾಯಿತಿಗಳಲ್ಲಿ ಜನರಲ್ ಸೀಟ್ ಅಭ್ಯರ್ಥಿಗಳು ಉಳಿದವರಿಗೆ ಡಿಮ್ಯಾಂಡ್ ಮಾಡಿ ಹೊಂದಾಣಿಕೆ ಆಗುವ ಪ್ರಸಂಗಗಳು ಸಹ ನಡೆದಿವೆ.
ಗ್ರಾಮ ಪಂಚಾಯಿತಿ ಸದಸ್ಯತ್ವದ ಬೆನ್ನಲ್ಲೇ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಕೂಗು ಬಲವಾಗಿದ್ದು, ಅಧಿಕಾರವನ್ನು ಸಮಬಲ ಪ್ರಭಾವಿಗಳು ಇಂತಿಷ್ಟು ಅವಧಿ ಎಂದು ಹಂಚಿಕೊಂಡರು ಆಶ್ಚರ್ಯ ಪಡಬೇಕಾಗಿಲ್ಲ. ಒಟ್ಟಾರೆ ಇದೆಲ್ಲದಕ್ಕೂ ಮೀಸಲಾತಿ ಪ್ರಕಟದ ನಂತರವೇ ಉತ್ತರ ಸಿಗಲಿದೆ.
Kshetra Samachara
05/01/2021 07:58 pm