ಧಾರವಾಡ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 30ಕ್ಕೆ ಧಾರವಾಡದ ಕಲಾಭವನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅದಕ್ಕೂ ಮುನ್ನ 22 ಹಾಗೂ 29ರವರೆಗೆ ಹುಬ್ಬಳ್ಳಿ,ಧಾರವಾಡದಲ್ಲಿ ಬೃಹತ್ ಮೆರವಣಿಗೆ ಮೂಲಕ ಸರ್ಕಾರದ ಗಮನ ಸೆಳೆಯಲಿದ್ದೇವೆ ಎಂದರು.
ಮೀಸಲಾತಿಗಾಗಿ ಕಳೆದ 20 ತಿಂಗಳಿನಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಸೋದರ ಸಮಾಜಗಳು ಈಗಾಗಲೇ ಮೀಸಲಾತಿ ಪಡೆದಿವೆ. ಪಂಚಮಸಾಲಿ ಸಮುದಾಯಕ್ಕೂ ಮೀಸಲಾತಿ ನೀಡುವ ಸಂಬಂಧ ಪಾದಯಾತ್ರೆ ಸಹ ಮಾಡಿದ್ದೆವು. ಅಲ್ಲದೇ ಉಪವಾಸ ಸತ್ಯಾಗ್ರಹ ಕೈಗೊಂಡಾಗ ಸಿಎಂ ಅವರು ಮೀಸಲಾತಿ ಕೊಡುತ್ತೇವೆ ಉಪವಾಸ ಸತ್ಯಾಗ್ರಹ ಕೈಬಿಡಿ ಎಂದು ಹೇಳಿದ್ದರು. ಅವರ ಭರವಸೆಯಿಂದಾಗಿ ನಾವು ಸತ್ಯಾಗ್ರಹ ಕೈಬಿಟ್ಟಿದ್ದೆವು. ಆದರೆ, ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ ಎಂದರು.
ಸೆಪ್ಟಂಬರ್ 17 ರ ಒಳಗಾಗಿ ಮೀಸಲಾತಿ ಕೊಡುತ್ತೇವೆ ಎಂಬ ಭರವಸೆಯನ್ನು ಸಿಎಂ ಕೊಟ್ಟಿದ್ದರು. ಬಜೆಟ್‌ನಲ್ಲೂ ಸಹ ನಮ್ಮ ಬೇಡಿಕೆ ಈಡೇರಿಲ್ಲ. ಹೀಗಾಗಿ ಅನಿವಾರ್ಯವಾಗಿ ಉಗ್ರ ಹೋರಾಟ ಮಾಡುವುದಕ್ಕಾಗಿ ಹಾವೇರಿಗೆ ಹೋಗಿದ್ದೆವು. 8 ತಿಂಗಳ ನಂತರ ಸರ್ವೇಯವರು ಬಂದು ಸರ್ವೆ ಆರಂಭಿಸಿದ್ದರು. 18 ಜಿಲ್ಲೆಗಳಲ್ಲಿ ಸರ್ವೆ ಮಾಡುವುದು ಇನ್ನೂ ಬಾಕಿ ಇದೆ. 2 ತಿಂಗಳು ಅವಕಾಶ ಕೊಡಿ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ. ಹೀಗಾಗಿ ಆಗಸ್ಟ್ 22ರ ಒಳಗೆ ನಮಗೆ ಸಿಹಿ ಸುದ್ದಿ ಕೊಡಬೇಕು. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ನಮ್ಮ ಹೋರಾಟ ನಡೆಯುತ್ತದೆ. ಹೀಗಾಗಿಯೇ ಸರ್ಕಾರದ ಗಮನಸೆಳೆಯುವುದಕ್ಕಾಗಿ ಧಾರವಾಡದಲ್ಲಿ 30 ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/07/2022 01:30 pm