ಧಾರವಾಡ: ಹಿಂದೂ ದೇವಸ್ಥಾನಗಳ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳು ತಲೆ ಮೇಲೆ ಟೋಪಿ ಹಾಕಿಕೊಂಡು, ಗಡ್ಡ ಬಿಟ್ಟುಕೊಂಡು, ಮೀಸೆ ಬೋಳಿಸಿಕೊಂಡು, ಪೈಜಾಮ್ ಹಾಕಿಕೊಂಡು ಕುಳಿತಾಗ ಅವರನ್ನು ಕಂಡ ಹಿಂದೂ ಭಕ್ತರಿಗೆ ಏನೆನ್ನಿಸುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ ಪ್ರಶ್ನೆ ಮಾಡಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಈ ರೀತಿಯ ಘಟನೆಗಳು ಆಗಲು ಕಾರಣ ಏನು ಎಂಬುದನ್ನು ಮೊದಲು ತಿಳಿದುಕೊಂಡು ತಳಮಟ್ಟದಿಂದ ಅದನ್ನು ಬಗೆಹರಿಸಬೇಕು. ಅದಕ್ಕಾಗಿಯೇ ಸಿ.ಟಿ.ರವಿ ಅವರು ತಲೆ ಒಡೆದಾಗ ಇಲ್ಲದ ಕಾಳಜಿ ಕಲ್ಲಂಗಡಿ ಒಡೆದಾಗ ಏಕಿಷ್ಟು ಕಾಳಜಿ ಎಂದು ಹೇಳಿದ್ದಾರೆ. ಅವರು ಸರಿಯಾಗಿಯೇ ಹೇಳಿದ್ದಾರೆ ಎಂದು ಸಿ.ಟಿ.ರವಿ ಅವರ ಹೇಳಿಕೆಯನ್ನು ಬೆಲ್ಲದ ಸಮರ್ಥಿಸಿಕೊಂಡರು.
ನುಗ್ಗಿಕೇರಿಯಲ್ಲಿ ಈ ರೀತಿ ಘಟನೆ ನಡೆಯಬಾರದಿತ್ತು. ಆದರೆ, ಹಿಜಾಬ್ ಕುರಿತು ಹೈಕೋರ್ಟ್ ಕೊಟ್ಟ ತೀರ್ಪನ್ನು ಮುಸ್ಲಿಂ ನಾಯಕರು ಸ್ವಾಗತಿಸದೇ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡುವ ಕೆಲಸ ಮಾಡಿದರು. ಇದರಿಂದ ಉಳಿದ ಸಮಾಜದವರಿಗೆ, ಮುಸ್ಲಿಂರು ಕಾನೂನಿಗೆ ಗೌರವ ಕೊಡುತ್ತಿಲ್ಲ ಎಂಬ ಸಂದೇಶ ರವಾನೆಯಾದಂತಾಯಿತು. ಈ ಬಗ್ಗೆ ಮುಸ್ಲಿಂ ನಾಯಕರು ಆಳಕ್ಕೆ ಇಳಿದು ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.
ನುಗ್ಗಿಕೇರಿ ದೇವಸ್ಥಾನ ಖಾಸಗಿ ದೇವಸ್ಥಾನ. ಅಲ್ಲಿ ಯಾರಿಗೆ ವ್ಯಾಪಾರಕ್ಕೆ ಅವಕಾಶ ಕೊಡಬೇಕು ಯಾರಿಗೆ ಕೊಡಬಾರದು ಎಂಬುದು ಟ್ರಸ್ಟ್‌ನವರಿಗೆ ಬಿಟ್ಟುಕೊಟ್ಟ ವಿಚಾರ. ಅದರಲ್ಲಿ ಪೊಲೀಸ್ ಇಲಾಖೆ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಸಮಾಜ ಶಾಂತಿಯಿಂದ ಇರಬೇಕಾದರೆ, ಗೊಂದಲ ಹುಟ್ಟಲು ಕಾರಣ ಏನು ಎಂಬುದನ್ನು ಮೊದಲು ತಿಳಿದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಕಲ್ಲಂಗಡಿ ಒಡೆದಿದ್ದನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ ಆದರೆ, ಅದರ ಆಳಕ್ಕೆ ಹೋಗಿ ಈ ಘಟನೆ ಏಕೆ ಆಯಿತು ಎಂಬುದನ್ನು ವಿಚಾರ ಮಾಡಬೇಕು ಎಂದರು.
ಇನ್ನೊಬ್ಬರಿಗೆ ಪ್ರಚೋದನೆ ಕೊಡುವ ಕೆಲಸ ಸಮಾಜದಲ್ಲಿ ಆಗಬಾರದು. ಹುಚ್ಚು ಹುಡುಗರು ನುಗ್ಗಿಕೇರಿಗೆ ಹೋಗಿ ಕಲ್ಲಂಗಡಿ ಒಡೆಯುತ್ತಾರೆ ಎಂದರೆ ಅದಕ್ಕೆ ಕಾರಣ ಏನು? ಮೊದಲು ಅದನ್ನು ತಿಳಿದುಕೊಳ್ಳಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/04/2022 02:56 pm