ಧಾರವಾಡ: ಧಾರವಾಡದ ಪ್ರಸಿದ್ಧ ನುಗ್ಗಿಕೇರಿ ಆಂಜನೇಯನ ದೇವಸ್ಥಾನದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ರು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಮನವಿ ಸಲ್ಲಿಸಿದರು. ಮುಸ್ಲಿಂರ ವಿರುದ್ಧ ಶ್ರೀರಾಮ ಸೇನೆ ಕಾರ್ಯಕರ್ತರು ಬಹಿರಂಗವಾಗಿಯೇ ಘೋಷಣೆ ಕೂಗಿದರು. ಅಲ್ಲದೇ ಹಿಂದೂ ದೇವಸ್ಥಾನಗಳ ಆವರಣದಲ್ಲಿ ಅವರಿಗೆ ವ್ಯಾಪಾರಕ್ಕೆ ಅವಕಾಶ ನೀಡಲೇಬಾರದು. ಒಂದು ವೇಳೆ ಸ್ವಯಂ ಪ್ರೇರಣೆಯಿಂದ ಅವರೇ ಅಂಗಡಿಗಳನ್ನು ತೆರವುಗೊಳಿಸಿಕೊಳ್ಳದಿದ್ದರೆ ನಾವೇ ಅವರ ಅಂಗಡಿಗಳನ್ನು ತೆರವುಗೊಳಿಸುತ್ತೇವೆ ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಹೇಳಿದರು.
ಇನ್ನು ಪ್ರತಿಭಟನಾಕಾರರ ಮನವಿ ಪಡೆದ ದೇವಸ್ಥಾನದ ಅರ್ಚಕರು, ಈ ಬಗ್ಗೆ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ. ಸೋಮವಾರ ಈ ಬಗ್ಗೆ ಹಿಂದಿನ ಪರ್ಯಾಯಸ್ಥರೊಂದಿಗೆ ಸಭೆ ನಡೆಸಲಾಗುತ್ತಿದ್ದು, ಸಭೆಯ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸದ್ಯ ಅಲ್ಲಲ್ಲಿ ಸುದ್ದಿಯಾಗುತ್ತಿದ್ದ ಮುಸ್ಲಿಂ ಅಂಗಡಿಗಳ ತೆರವು ವಿಚಾರ ಇದೀಗ ಧಾರವಾಡಕ್ಕೂ ಕಾಲಿಟ್ಟಿದೆ. ಬರುವ ದಿನಗಳಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆಯೋ ಕಾದು ನೋಡಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
26/03/2022 04:18 pm