ಹುಬ್ಬಳ್ಳಿ: ಸಾರ್ವಜನಿಕರಿಗೆ ಗುಣಮಟ್ಟದ ಸಾರಿಗೆ ಸೇವೆ ನೀಡುವ ಧೇಯೋದ್ದೇಶ ಹೊಂದಿರುವ ಸಾರಿಗೆ ಸಂಸ್ಥೆ ಸಾರ್ವಜನಿಕ ಜೊತೆಗೆ ಆಟ ಆಡುತ್ತಿದೆ. ಮಾಡಿದ ತಪ್ಪಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಈಗ ಸಾರಿಗೆ ಸಂಸ್ಥೆಯ ಬಸ್ ಗಳನ್ನು ಜಪ್ತಿ ಮಾಡುವ ಮಟ್ಟಿಗೆ ಬಂದು ನಿಂತಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೆ ನಡೆದಿದ್ದ ಪ್ರಕರಣ ಮಾಸುವ ಮುನ್ನವೇ ಪರಿಹಾರ ನೀಡದಿರುವ ಬಸ್ ಜಪ್ತಿ ಮಾಡಲಾಗಿದೆ.
ಹೌದು. 2017 ರ ನವೆಂಬರ್ 08 ರಂದು ಕಾರವಾರ ರಸ್ತೆಯಲ್ಲಿರುವ ಇಎಸ್ಐ ಆಸ್ಪತ್ರೆಯ ಬಳಿಯಲ್ಲಿ ಸಾರಿಗೆ ಸಂಸ್ಥೆ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ, ಬೈಕ್ ಹಿಂಬದಿ ಸವಾರರು ಸಾವನ್ನಪ್ಪಿದ್ದರು. ಹುಬ್ಬಳ್ಳಿ ಆನಂದನಗರದ ನಿವಾಸಿ ಶಾರದಾ ಲಿಂಗಪ್ಪ ಶಿವಳ್ಳಿ ಎಂಬುವವರು ತಮ್ಮ ಪತಿಯ ಜೊತೆಗೆ ಹೋಗುತ್ತಿದ್ದ ವೇಳೆಯಲ್ಲಿ ಅಪಘಾತದಲ್ಲಿ ಸಾವನ್ನಪ್ಪಿದ್ದು, ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಕ್ಕಾಗಿ ಕುಟುಂಬದವರು ಕೋರ್ಟ್ ಮೆಟ್ಟಿಲೇರಿ ವಕೀಲರಾದ ಅರುಣ ಪಾಟೀಲ ನೇತೃತ್ವದಲ್ಲಿ ವಾದ ಮಂಡಿಸಿದ್ದರು. ಈ ಪ್ರಕರಣವನ್ನು ಪರಿಶೀಲನೆ ನಡೆಸಿದ್ದ ನ್ಯಾಯಾಲಯ 16.62 ಲಕ್ಷ ಪರಿಹಾರವನ್ನು ಆದೇಶಿಸಿತ್ತು. ಅಲ್ಲದೇ 6% ಬಡ್ಡಿಯ ಜೊತೆಗೆ ಪಾವತಿಸುವಂತೆ ಒಟ್ಟು 21 ಲಕ್ಷ ತುಂಬುವಂತೆ ಆದೇಶ ನೀಡಿತ್ತು. ಆದರೆ ಸಂತ್ರಸ್ತರಿಗೆ ಮಾತ್ರ ಕೇವಲ ಐದು ಲಕ್ಷ ಹಣ ಬಂದಿದ್ದು, ಈಗ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದು, ಈ ನ್ಯಾಯಾಲಯ ಬಸ್ ಜಪ್ತಿಗೆ ಆದೇಶಿಸಿದೆ.
ಇನ್ನೂ ಈ ಹಿಂದೆಯಷ್ಟೆ ಜಪ್ತಿ ಮಾಡಿದ್ದ ಸಂದರ್ಭದಲ್ಲಿ 5 ಲಕ್ಷ ಹಣವನ್ನು ನೀಡಿದ್ದರು. ಕೂಡಲೇ ಪರಿಹಾರ ನೀಡುವಂತೆ ಎರಡನೇ ಹಿರಿಯ ನ್ಯಾಯಾಲಯದ ಆಗಿನ ನ್ಯಾಯಾಧೀಶರಾಗಿದ್ದ ಕುಮಾರಿ ಸುಜಾತಾ ಅವರು ಆದೇಶ ನೀಡಿದ್ದರು. ಹೀಗಿದ್ದರೂ ಕೂಡ ಸಾರಿಗೆ ಸಂಸ್ಥೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದ್ದು, ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಒಟ್ಟಿನಲ್ಲಿ ಆರ್ಥಿಕ ಸಂಕಷ್ಟದ ನೆಪ ಹೇಳಿ ಸಾರಿಗೆ ಸಂಸ್ಥೆ ಸೂಕ್ತ ಪರಿಹಾರ ನೀಡದೇ ಸತಾಯಿಸುತ್ತಿದ್ದು, ಇನ್ನಾದರೂ ಸಂತ್ರಸ್ತರ ಕುಟುಂಬಕ್ಕೆ ಸಚಿವರು ಹಾಗೂ ಸಂಸ್ಥೆಯ ಅಧ್ಯಕ್ಷರು ಮುತುವರ್ಜಿಯಿಂದ ಪರಿಹಾರ ತಲುಪಿಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
01/08/2022 05:56 pm