ಹುಬ್ಬಳ್ಳಿ: ಇವರು ಇಡೀ ದೇಶದ ಜನರ ಹಸಿವನ್ನೇ ನೀಗಿಸುವಂತಹವರು. ಬಿಸಿಲು, ಮಳೆ ಎನ್ನದೇ ಹೊಲದಲ್ಲಿ ಬೆಳೆಗಳನ್ನು ಬೆಳೆದು ಕಡಿಮೆ ಬೆಲೆಗೆ ಮಾರಾಟ ಮಾಡಿ ತಮ್ಮ ಜೀವನವನ್ನು ನಡೆಸುವವರು. ಆದ್ರೆ ಈ ಕಿವುಡು ಸರ್ಕಾರ ಈ ಅನ್ನದಾತನ ಗೋಳನ್ನು ಕೇಳುತ್ತಿಲ್ಲ....
ಹೌದು… ಹೀಗೆ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಸರ್ಕಾರಕ್ಕೆ ಒತ್ತಾಯ ಮಾಡುತ್ತಿರುವ ಇವರು ರೈತಾಪಿ ವರ್ಗದವರು. ದಿನ ಬೆಳಗಾದರೆ ಇವರು ಹೊಲದಲ್ಲಿ ದುಡಿದು ದೇಶದ ಜನರಿಗೆ ಅನ್ನ ನೀಡುವವರು. ಆದ್ರೆ ಇವರು ಕಷ್ಟದಲ್ಲಿದ್ದರೂ ಕೂಡ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಬಹುದಿನದ ಹೋರಾಟವಾದ ಮಹದಾಯಿ ಕಾಮಗಾರಿ ಪೂರ್ಣಗೊಳಿಸಬೇಕು, ರೈತರ ಹಕ್ಕು ಪತ್ರ ನೀಡಬೇಕು, ಸುಮಾರು ಮೂರ್ನಾಲ್ಕು ವರ್ಷಗಳಿಂದ ಸರಿಯಾಗಿ ಬೆಳೆವಿಮೆ ಬಂದಿಲ್ಲವಂತೆ, ಸಾಲ ಮನ್ನಾ ಮಾಡಿಲ್ಲ. ಮಳೆಯಿಂದಾಗಿ ಹೊಲದಲ್ಲಿದ್ದ ಬೆಳೆ ನಾಶವಾಗಿ ಅದೆಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಸರ್ಕಾರಕ್ಕೆ ಕಾಣುತ್ತಿಲ್ಲವೆಂದು ರೈತರು ಗರಂ ಆಗಿದ್ದಾರೆ.
ಇನ್ನು ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಇವರಿಗೆ ಚುನಾವಣೆಯಲ್ಲಿ ಮತ ಹಾಕಿಸಿಕೊಳ್ಳಲು ರೈತರು ಬೇಕು. ರೈತರು ದುಡಿದ ಅನ್ನ ಬೇಕು. ಆದ್ರೆ ಅವರು ತಮ್ಮ ಸಮಸ್ಯೆ ಹೇಳಿಕೊಂಡು ಬಂದರೆ ಸರ್ಕಾರ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಹೀಗಾಗಿ ರೈತರು ಮತ್ತು ಕೆಲ ರೈತ ಸಂಘಟನೆಗಳು ಸೇರಿಕೊಂಡು ಇದೇ ತಿಂಗಳು 8 ನೇ ದಿನಾಂಕದಂದು ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.
ರೈತರು ಕೆಲ ಬೇಡಿಕೆಗಳನ್ನು ಈಡೇರಿಸಲು ಅದೆಷ್ಟೋ ಬಾರಿ ಹೋರಾಟ ಮಾಡಿದ್ದಾರೆ. ಆದ್ರೆ ಸರ್ಕಾರ ಮಾತ್ರ ನಮಗೆ ನಿಮಗೆ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದೆ. ಇನ್ನಾದರೂ ಸರ್ಕಾರ ದೇಶದ ಬೆನ್ನೆಲುಬು ರೈತನ ಬೇಡಿಕೆಗಳನ್ನು ಈಡೇರಿಸಬೇಕು.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
06/08/2022 03:46 pm