ಪಬ್ಲಿಕ್ ನೆಕ್ಸ್ಟ್ ವರದಿ- ಈರಣ್ಣ ವಾಲಿಕಾರ
ಹುಬ್ಬಳ್ಳಿ: ಕೇಂದ್ರ ಸರ್ಕಾರ ಈಗಾಗಲೇ ಹಲವು ಇಲಾಖೆಗಳನ್ನ ಖಾಸಗೀಕರಣ ಮಾಡಿದೆ. ಇದರ ಬೆನ್ನಲ್ಲೇ ಬ್ಯಾಂಕುಗಳನ್ನ ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದಾಗಿ ಬ್ಯಾಂಕ್ ನೌಕರರು ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಲು ನಿರ್ಧರಿಸಿದ್ದಾರೆ.
ಹೌದು…. ಖಾಸಗೀಕರಣ ವಿರೋಧಿಸಿ ಒಂದೆಡೆ ರಸ್ತೆಗಿಳಿದು 2015 ರಿಂದ ಹೋರಾಟ ಮಾಡುತ್ತಿರುವವರು, ಇನ್ನೊಂದಡೆ ನೌಕರರು ಸಾಲಾಗಿ ನಿಂತು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ದೃಶ್ಯಗಳು. ಇದಕ್ಕೆಲ್ಲ ಕಾರಣ ಕೇಂದ್ರ ಸರ್ಕಾರ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡಲು ಮುಂದಾಗಿರೋದು. ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ವತಿಯಿಂದ ಸೆಪ್ಟೆಂಬರ್ 23 ರಂದು, ಗ್ರಾಮೀಣ ಬ್ಯಾಂಕುಗಳಲ್ಲಿ ಒಂದು ದಿನದ ರಾಷ್ಟ್ರೀಯ ಮುಷ್ಕರವನ್ನು ಆಚರಿಸಲು ಕರೆ ಕೊಡಲು ಸಿದ್ಧತೆ ಮಾಡುತ್ತಿದ್ದಾರೆ.
ಇನ್ನು 1976 ರಲ್ಲಿ ಪ್ರಾರಂಭವಾದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಈವರೆಗೆ ಸಣ್ಣ ರೈತರು, ಅತಿ ಸಣ್ಣ ರೈತರು, ಗ್ರಾಮೀಣ ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯ ಒದಗಿಸಿ ಗ್ರಾಮೀಣ ಸಾಲ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿವೆ. ಇಲ್ಲಿಯವರೆಗೆ ದೇಶದಲ್ಲಿ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು 22300 ಶಾಖೆಗಳನ್ನು ಹೊಂದಿದ್ದು, ಅದರಲ್ಲಿ 17 ರಾಜ್ಯಮಟ್ಟದ ಗ್ರಾಮೀಣ ಬ್ಯಾಂಕ್ ಗಳು ಈಗಾಗಲೇ ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಷ್ಟೊಂದು ಒಳ್ಳೆಯದಾಗಿ ಕಾರ್ಯ ನಿರ್ವಹಿಸುತ್ತ ಹೋದರೂ ಕೂಡ ಕೇಂದ್ರ ಸರ್ಕಾರ ಖಾಸಗೀಕರಣ ಮಾಡುತ್ತಿರುವುದರಿಂದ ನೌಕರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ಗ್ರಾಮೀಣ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಬಾರದೆಂದು ಸಾಕಷ್ಟು ಹೋರಾಟ ಮಾಡಿದ್ದಾರೆ. ಕೂಡಲೇ ಈ ವಿಚಾರವನ್ನು ಇಲ್ಲಿಗೆ ಕೈ ಬಿಟ್ಟರೆ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Kshetra Samachara
17/09/2022 04:13 pm