ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ

ಹುಬ್ಬಳ್ಳಿ:ಹೆಚ್ಚುತ್ತಿರುವ ನಗರಗಳ ಜನ ಸಂಖ್ಯೆಗೆ ಅನುಗುಣವಾಗಿ ಜನ ಜೀವನಮಟ್ಟದ ಹೆಚ್ಚಳ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಭಾರತ ಸರ್ಕಾರವು 100 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ರಾಮನಗರ(ಅಳ್ನಾವರ) ಧಾರವಾಡ ನವಲಗುಂದ-ಗದಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನಾಗಿಸಿ ಭಾರತಮಾಲಾ 2 ರಡಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಲ್ಹಾದ ಜೋಶಿ ಹೇಳಿದರು.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಅನುದಾನದಡಿ ಅಭಿವೃದ್ಧಿ ಪಡಿಸಲಾಗಿರುವ ಹಾಗೂ ಕಾಮಗಾರಿ ಪೂರ್ಣಗೊಂಡಿರುವ ವಿವಿಧ ಯೋಜನೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಪ್ರಧಾನ ಮಂತ್ರಿಯವರ ವಿಶಿಷ್ಟ ಕಲ್ಪನೆಯೊಂದಿಗೆ ಪಿಪಿಪಿ ಮಾದರಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.

ಒಟ್ಟು 5 ವರ್ಷಗಳ ಅವಧಿಯಲ್ಲಿ ದೇಶದ ನಗರಗಳ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ.ಮೀಸಲಿಡಲಾಗಿದೆ.ಹುಬ್ಬಳ್ಳಿ- ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಗೆ 594 ಕೋಟಿ ರೂ.ಒದಗಿಸಲಾಗಿದ್ದು 64 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.ಅವುಗಳಲ್ಲಿ 39 ಕಾಮಗಾರಿಗಳು ಪೂರ್ಣಗೊಂಡಿವೆ. ಸಾರಿಗೆ ಸಂಪರ್ಕ ವ್ಯವಸ್ಥೆಗಾಗಿ ರೈಲು,ವಿಮಾನ ಹಾಗೂ ಹೆದ್ದಾರಿಗಳ ಉನ್ನತೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ‌.ಹುಬ್ಬಳ್ಳಿಯಿಂದ ಹೈದರಾಬಾದಿಗೆ ವಿಮಾನ ಸಂಚಾರ ಪ್ರಾರಂಭವಾಗಿದೆ. ಇನ್ನೆರಡು ದಿನಗಳಲ್ಲಿ ಮಂಗಳೂರು ಮತ್ತು ಮೈಸೂರಿಗೂ ವಿಮಾನಯಾನ ಪ್ರಾರಂಭವಾಗಲಿದೆ.

ಜನಸಂಚಾರದ ಪ್ರತಿಕ್ರಿಯೆ ಆಧರಿಸಿ ವಾರದ ಏಳು ದಿನಗಳಿಗೂ ಸೇವೆ ವಿಸ್ತರಿಸಲು ಇಂಡಿಗೋ ಆಡಳಿತ ಮಂಡಳಿಗೆ ತಿಳಿಸಲಾಗಿದೆ.ಕೇಂದ್ರ ಭೂ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿ ಅಳ್ನಾವರ(ರಾಮನಗರ)-ಧಾರವಾಡ-ನವಲಗುಂದ-ಗದಗ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯನ್ನಾಗಿ ಭಾರತ ಮಾಲಾ 2 ರಡಿ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ ಪಡೆಯಲಾಗಿದೆ. ಉಪರಾಜ್ಯ ಸಾರಿಗೆ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಹಂತದ ಅಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯನ್ನು ಆರು ಪಥಗಳಿಂದ ಎಂಟು ಪಥಗಳಿಗೆ ಹೆಚ್ಚಿಸಲು ಕೂಡ ಒಪ್ಪಿಗೆ ದೊರೆತಿದೆ. ನಗರಗಳಲ್ಲಿ ಗುಣ ಮಟ್ಟದ ಮೂಲಸೌಕರ್ಯಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ ಎಂದರು.

Edited By : Manjunath H D
Kshetra Samachara

Kshetra Samachara

30/04/2022 04:34 pm

Cinque Terre

24.38 K

Cinque Terre

1

ಸಂಬಂಧಿತ ಸುದ್ದಿ