ಧಾರವಾಡ: ಧಾರವಾಡ ತಾಲೂಕಿನ ಗರಗ, ಲಕಮಾಪೂರ, ಹಂಗರಕಿ ಹಾಗೂ ಮುಮ್ಮಿಗಟ್ಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿಯವರು ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶಾಸಕ ಅಮೃತ ದೇಸಾಯಿ, ಕೊರೊನಾದಿಂದ ಆರ್ಥಿಕತೆಗೆ ಹಿನ್ನಡೆಯಾಗಿದ್ದರೂ, ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ರೀತಿಯ ಹಿನ್ನಡೆ ಆಗದಂತೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮಾಡಿದೆ. ಅಭಿವೃದ್ಧಿ ಎಂಬುದು ನಿಂತ ನೀರಲ್ಲ ಅದು ನಿರಂತರ ಹರಿಯುವ ನೀರಾಗಬೇಕು. ಗ್ರಾಮಗಳ ಸಂಪೂರ್ಣ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಹಲವಾರು ಜನಪರ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಪೈಕಿ ಹಲವಾರು ಯೋಜನೆಗಳನ್ನು ಈಗಾಗಲೇ ಅನುಷ್ಠಾನಕ್ಕೆ ತರಲಾಗಿದೆ ಎಂದು ತಿಳಿಸಿದರು.
ರಸ್ತೆ ದುರಸ್ಥಿ ಹಾಗೂ ಸೇತುವೆ ಪುನರ್ ನಿರ್ಮಾಣದ ಕಾಮಗಾರಿಯ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸೂಚನೆ ನೀಡಿದರು.
ಅದಕ್ಕೂ ಮುನ್ನ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅನುದಾನದಡಿ ಅಂದಾಜು 1 ಕೋಟಿ ರೂಪಾಯಿ ವೆಚ್ಚದಲ್ಲಿ ಗರಗ-ಹಂಗರಕಿ ಗ್ರಾಮದ ಶ್ರೀ ಮಡಿವಾಳೇಶ್ವರ ಕಲ್ಮಠದ ಹತ್ತಿರದ ತುಪ್ಪರಿ ಹಳ್ಳದ ಉಪನಾಲಾಗಳ ಅಭಿವೃಧ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ನಂತರ ಧಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿ ಕವಲಗೇರಿ ಮೂಲಕ ನರೇಂದ್ರ ರಸ್ತೆಯ 7.50 ಕಿಲೋ ಮೀಟರ್‌ದಿಂದ 7.90 ಕಿಲೋ ಮೀಟರ್‌ವರೆಗೆ ರಸ್ತೆ ದುರಸ್ಥಿ ಮತ್ತು ಸೇತುವೆಯ ಪುನರ್ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ. ಅಧ್ಯಕ್ಷರಾದ ಲಕ್ಷ್ಮೀ ಕಾಶಿಗಾರ, ಮಹೇಶ ಯಲಿಗಾರ, ಸಂತೋಷ್ ಶಟೋಜಿ, ರಾಜು ಕಟ್ಟಿಮನಿ, ವಿಠ್ಠಲ ಪೂಜಾರ, ಶಿವಾನಂದ ತೋಟಗಿ, ಕಿರಣ ಬುಲಬುಲೆ, ಈರೇಶ ಅಂಚಟಗೇರಿ, ನೀತಿನ ಇಂಡಿ, ಬಸವರಾಜ ಬೆಳ್ಳಕ್ಕಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
Kshetra Samachara
04/02/2022 10:32 pm