ಹುಬ್ಬಳ್ಳಿ: ರಾಜ್ಯದ 2 ನೇ ಅತಿದೊಡ್ಡ ಮಹಾನಗರ ಪಾಲಿಕೆಯನ್ನು ಹೊಂದಿರುವ ಜಿಲ್ಲೆ ಧಾರವಾಡ. ಹುಬ್ಬಳ್ಳಿ-ಧಾರವಾಡ ಅವಳಿ ನಗರಿ ಬೆಳೆದಂತೆ ಜಿಲ್ಲೆಯಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಈ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಕೇಂದ್ರ ಸರ್ಕಾರ 300 ಕೋಟಿ ರೂಪಾಯಿ ವ್ಯಯಿಸಿ, ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಿದೆ. ಈಗಾಗಲೇ ಯೋಜನೆಯ ಶಂಕು ಸ್ಥಾಪನೆಯನ್ನು ಕೂಡ ನೇರವೇರಿಸಲಾಗಿದೆ. ಆದರೆ, ಈ ಫ್ಲೈಓವರ್ ನಿರ್ಮಾಣ ಕಾಮಗಾರಿಗಾಗಿ ಮಹಾನಗರ ಪಾಲಿಕೆ ತನ್ನ ಆಸ್ತಿ ಹರಾಜಿಗೆ ಮುಂದಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೊನ್ನೆಯಷ್ಟೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿಡಿಯೋ ಕಾನ್ಫೆರನ್ಸ್ ಮೂಲಕ ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣ ಆಗುತ್ತಿರುವ ಫ್ಲೈಓವರ್ ಯೋಜನೆಗೆ ಚಾಲನೆ ನೀಡಿದ್ದಾರೆ. ಅಲ್ಲದೇ ಯೋಜನೆಯ ಅನುಷ್ಠಾನಕ್ಕೆ 300 ಕೋಟಿಗೂ ಅಧಿಕ ಅನುದಾನವನ್ನು ಬಿಡುಗಡೆಗೊಳಿಸಿದ್ದರು. ಅಲ್ಲದೇ ಕಾಮಗಾರಿಯ ನೀಲನಕ್ಷೆಯನ್ನು ನೋಡಿ ಜಿಲ್ಲೆಯ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನ ಹಾಡಿಹೊಗಳಿದ್ದರು. ಆದರೆ, ಇಂದು ಅದೇ ಯೋಜನೆಯ ಫ್ಲೈಓವರ್ ವಿಸ್ತರಣೆಗೆ ಅಗತ್ಯ ಬೀಳುವ ಹಣಕಾಸು ಕೊರತೆ ನೀಗಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತನ್ನ ಒಡೆತನದ ಆಸ್ತಿಯನ್ನು ಹರಾಜು ಮಾಡಲು ಸಿದ್ದತೆ ನಡೆಸಿದೆ. ಯೋಜನೆಗೆ ಹಣಕಾಸು ಕೊರತೆ ಎದುರಾಗಿದ್ದು ಆರಂಭದಲ್ಲೇ ಈಗ ವಿಘ್ನ ಎದುರಾಗಿದೆ.
ಕೇಂದ್ರ ಸರ್ಕಾರದ ಸಿಆರ್ಎಫ್ ಅನುದಾನದಡಿ ಫ್ಲೈಓವರ್ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಚೆನ್ನಮ್ಮ ವೃತ್ತದಿಂದ ಸ್ಟೇಷನ್ ರಸ್ತೆಯ ಅಂಬೇಡ್ಕರ್ ಸರ್ಕಲ್, ದೇಸಾಯಿ ವೃತ್ತ, ಹಾಗೂ ಗೋಕುಲ್ ರಸ್ತೆಯ ಕ್ಲಾರ್ಕ್ ಇನ್ ಹೋಟೆಲ್ ವರೆಗೆ ಫ್ಲೈಓವರ್ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ಬಂಕಾಪುರ ಚೌಕದಿಂದ ಕಿತ್ತೂರು ಚೆನ್ನಮ್ಮ ವೃತ್ತ ಸಂಪರ್ಕಿಸುವ ಪಿ.ಬಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣ ಕಾರ್ಯವನ್ನು ಬಿಡಲಾಗಿದೆ. ಇದರಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪಿ.ಬಿ ರಸ್ತೆಯಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ ಇದಕ್ಕೆ ಅಗತ್ಯ ಬೀಳುವ ಹಣವನ್ನ ಮಹಾನಗರ ಪಾಲಿಕೆಯಿಂದ ವಂತಿಗೆ ಪಡೆಯಲು ನಿರ್ಧರಿಸಲಾಗಿದ್ದು, ಪಾಲಿಕೆ ತನ್ನ ಒಡೆತನದಲ್ಲಿರುವ ನವನಗರದಲ್ಲಿನ ನಿವೇಶನಗಳ ಮಾರಾಟಕ್ಕೆ ಮುಂದಾಗಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೊದಲೇ ಆರ್ಥಿಕ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ತನ್ನ ಒಡೆತನದ ಆಸ್ತಿಯನ್ನು ಮಾರಾಟ ಮಾಡುವುದು ಸರಿಯಲ್ಲ ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದ್ದು, 50 ಕೋಟಿ ರೂಪಾಯಿಗಾಗಿ ಪಾಲಿಕೆ ತನ್ನ ಆಸ್ತಿ ಮಾರಾಟ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ಫ್ಲೈಓವರ್ ಆಗಬೇಕು ಅನ್ನೋದು ಸಾರ್ವಜನಿಕರ ಒತ್ತಾಯವಾಗಿದೆ.
Kshetra Samachara
29/01/2021 03:53 pm