ಅದು ಅವಳಿನಗರದ ಮಹತ್ವಪೂರ್ಣ ಯೋಜನೆಯಲ್ಲಿ ಒಂದು. ಆದರೆ, ಈ ಯೋಜನೆಯಲ್ಲಿ ದೊಡ್ಡಮಟ್ಟದ ಅವ್ಯವಹಾರವೇ ಸೃಷ್ಟಿಯಾಗಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ ವಿಸ್ತೃತ ವರದಿಯನ್ನು ಅಭಿಯಾನದ ಮೂಲಕ ಜನರಿಗೆ ಮುಟ್ಟುವಂತೆ ಮಾಡಿತ್ತು. ಇದರ ಬೆನ್ನಲ್ಲೇ ತನಿಖೆಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದ ಹೋರಾಟಗಾರರು ಈಗ ಮುಂದುವರಿದ ಭಾಗವಾಗಿ ಮತ್ತೊಂದು ದೂರು ದಾಖಲು ಮಾಡಿದ್ದಾರೆ.
ಹೌದು... ಒಂದು ಉದ್ಯಾನವನವನ್ನು ಆರಂಭಿಕ ಹಂತದಲ್ಲಿಯೇ ನಿರ್ಮಾಣ ಮಾಡಿ ಅಭಿವೃದ್ಧಿ ಮಾಡಲು ಸಿಂಗಲ್ ಡಿಜಿಟ್ ನಲ್ಲಿರುವ ಕೋಟಿ ಅನುದಾನ ಸಾಕು. ಆದರೆ, ಹಳೆ ಮಣ್ಣಿನ ಗೋಡೆಗೆ ಬಣ್ಣ ಬಳಿದು 26.11 ಕೋಟಿ ಸಾರ್ವಜನಿಕ ಹಣವನ್ನು ಪೋಲು ಮಾಡಿರುವುದು ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು...ಈ ಹಿಂದೆಯಷ್ಟೆ ಪಬ್ಲಿಕ್ ನೆಕ್ಸ್ಟ್ ಮಹಾತ್ಮ ಗಾಂಧಿ ಉದ್ಯಾನವನ ಹಾಗೂ ಇಂದಿರಾ ಗಾಜಿನ ಮನೆ ಆವರಣದಲ್ಲಿ ನಿರ್ಮಾಣಗೊಂಡಿರುವ ಬಗ್ಗೆ ವಿಶೇಷ ವರದಿ ಮಾಡಿತ್ತು. ಈ ಕುರಿತು ಸಾರ್ವಜನಿಕರು ಈ ಭ್ರಷ್ಟಾಚಾರ ಹಾಗೂ ಸಾರ್ವಜನಿಕ ಹಣವನ್ನು ಲೂಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ತನಿಖೆ ನಡೆಸುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಈಗ ಸ್ಮಾರ್ಟ್ ಸಿಟಿ ವ್ಯವಸ್ಥಾಪಕರ ಮೇಲೆಯೇ ತನಿಖೆಗೆ ಆಗ್ರಹಿಸಿ ದೂರು ಸಲ್ಲಿಸಿದ್ದಾರೆ.
ಇನ್ನು, ಇರುವ ಗೋಡೆಗಳಿಗೆ ಸುಣ್ಣಬಣ್ಣ ಬಳಿದಿದ್ದು, ಮೊದಲು ಇದ್ದ ಕಾರಂಜಿ ಸ್ವಲ್ಪ ಮಟ್ಟಿಗೆ ಆಧುನೀಕರಣಗೊಳಿಸಿದ್ದಾರೆ. ಫುಟ್ ಪಾತ್ ಗಳಿಗೂ ಬಣ್ಣ ಬಳಿದು ಜನರಿಗೆ ಹಗಲಿನಲ್ಲಿಯೇ ನಕ್ಷತ್ರ ತೋರಿಸುವ ರೀತಿಯಲ್ಲಿ ಅಧಿಕಾರಿಗಳ, ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಜನರ ದುಡ್ಡಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕರ ವಿರುದ್ಧ ಕೂಡ ದೂರನ್ನು ಸಲ್ಲಿಸಿದ್ದಾರೆ. ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಅವರೇ ಈ ಅವ್ಯವಸ್ಥೆಗೆ ಕಾರಣ ಎಂದು ಆರೋಪಿಸಿರುವ ಹೋರಾಟಗಾರರು ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಹೆಸರಲ್ಲಿ ಜನರ ಹಣವನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಈ ಬ್ರಹ್ಮಾಂಡ ಭ್ರಷ್ಟಾಚಾರದ ಹಿಂದೆ ಯಾರ ಕೈವಾಡವಿದೆ ಎಂಬುದು ಲೋಕಾಯುಕ್ತ ತನಿಖೆ ನಂತರವೇ ಬಯಲಿಗೆ ಬರಲಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
16/07/2022 05:15 pm