ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನಸಾಮಾನ್ಯ ಅನುಕೂಲಕ್ಕಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಇತ್ತೀಚೆಗಷ್ಟೇ ಜೆಟ್ಟಿಂಗ್ ವಾಹನಗಳನ್ನು ಖರೀದಿಸಿದ್ದಾರೆ. ಅವಳಿ ನಗರದ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್ ಕ್ಲೀನಿಂಗ್ ಮಾಡುವ ಉದ್ದೇಶದಿಂದ ಹೊಸ ವಾಹನಗಳನ್ನು ಖರೀದಿ ಮಾಡಲಾಗಿದೆ.
ಒಂದು ಜೆಟ್ಟಿಂಗ್ ಮಷಿನ್ ವಾಹನಕ್ಕೆ ಬರೋಬ್ಬರಿ 26 ಲಕ್ಷ ರೂ.ದಂತೆ ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ಬರೋಬ್ಬರಿ ಎಂಟು ವಾಹನಗಳನ್ನು ಖರೀದಿಸಿದ್ದಾರೆ. ಆದರೆ ಖರೀದಿ ಮಾಡಿದಾಗಿನಿಂದಲೂ ಸಾರ್ವಜನಿಕರಿಗೆ ಅನುಕೂಲವಾಗಬೇಕಿದ್ದ ಈ ವಾಹನಗಳು ಪಾಲಿಕೆ ಆವರಣದ ಮೂಲೆ ಸೇರಿವೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಎಂಟು ವಾಹನಗಳು ಬಳಕೆಯಾಗದೇ ನಿಂತಿರೋದು ಜನಸಾಮಾನ್ಯರಲ್ಲಿ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಇನ್ನೂ ಪ್ರಮುಖವಾಗಿ ಅವಳಿನಗರದ ಜನತೆ ದಿನನಿತ್ಯ ಒಂದಿಲ್ಲೊಂದು ಸಮಸ್ಯೆ ಅನುಭವಿಸುತ್ತಲೇ ಇದ್ದಾರೆ. ಅಲ್ದೆ ಯುಜಿಡಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿರೋದ್ರಿಂದ ಒಳಚರಂಡಿ ಸಮಸ್ಯೆಯಂತೂ ಹೇಳತೀರದು. ಇದರಿಂದಾಗಿ ನಗರದ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಒಳಚರಂಡಿ ಅವ್ಯವಸ್ಥೆಯನ್ನ ಸರಿಪಡಿಸೋ ನೆಪದಲ್ಲಿ ಅಧಿಕಾರಿಗಳು ಈ ರೀತಿ ಎಂಟು ವಾಹನಗಳನ್ನ ಕೋಟಿ ಕೋಟಿ ರೂಪಾಯಿ ಹಣ ನೀಡಿ ಖರೀದಿ ಮಾಡುವ ಮೂಲಕ ಗೋಲ್ ಮಾಲ್ ನಡೆಸಿದ್ದಾರಾ ಅನ್ನೋ ಅನುಮಾನಗಳು ದಟ್ಟವಾಗಿ ಕಾಡುತ್ತಿವೆ. ಅಷ್ಟೇ ಅಲ್ಲದೆ ನಗರದ ಸಮಸ್ಯೆ ನೀಗಿಸಲು ಹೊಸ ವಾಹನಗಳನ್ನ ಖರೀದಿ ಮಾಡಿದ್ರೂ ಆ ವಾಹನಗಳು ಕಾರ್ಯನಿರ್ವಹಿಸದೇ ಪಾಲಿಕೆ ಆವರಣದ ಮೂಲೆಯಲ್ಲಿ ನಿಂತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಈ ವಾಹನಗಳು ಬಳಕೆಗೆ ಮುಕ್ತವಾಗಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಆದ್ರೆ ಪಾಲಿಕೆ ಅಧಿಕಾರಿಗಳು ಮಾತ್ರ ತಾವು ಮಾಡುತ್ತಿರೋ ಎಡವಟ್ಟಿಗೆ ಸಮರ್ಥನೆ ಕೊಡುತ್ತಿರೋದು ಮಾತ್ರ ಅಸಮಂಜಸವಾಗಿದೆ.
ಅವಳಿ ನಗರದ ಅಭಿವೃದ್ಧಿ ನೆಪದಲ್ಲಿ ಕೇವಲ ಖರ್ಚು ವೆಚ್ಚ ತೋರಿಸುವ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳು ಈ ರೀತಿ ವಾಹನ ಖರೀದಿ ಸೇರಿದಂತೆ ಹಲವು ವಿಚಾರಗಳಲ್ಲಿ ಕೋಟಿ ಕೋಟಿ ಹಣ ವ್ಯಯಿಸಿ ಗೋಲ್ ಮಾಲ್ ನಡೆಸಿದ್ದಾರಾ ಅನ್ನೋ ಅನುಮಾನಗಳು ಕಾಡುತ್ತಿದೆ. ಇನ್ನಾದ್ರೂ ಅಧಿಕಾರಿಗಳು ಅವಳಿ ನಗರದ ಅಭ್ಯುದಯಕ್ಕೆ ಪ್ರಾಮಾಣಿಕವಾಗಿ ಕಾರ್ಯ ಮಾಡುವ ಮೂಲಕ ಜನಸಾಮಾನ್ಯರಿಗೆ ಉತ್ತಮ ಸೌಲಭ್ಯ ಒದಗಿಸಬೇಕಿದೆ.
Kshetra Samachara
28/05/2022 10:18 am